
ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕವಾಗಿ 6 ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಟ್ಟಿನ ರಜೆ ಸಾಧ್ಯಾಸಾಧ್ಯತೆ ಪರಿಶೀಲಿಸಲು ರಚಿಸಲಾದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವರದಿಯಾಗಿದೆ.
ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡುವುದರ ಸಾಧ್ಯಾಸಾಧ್ಯತೆ ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈ ವರ್ಷದ ಜುಲೈನಲ್ಲಿ ನಿರ್ದೇಶನ ನೀಡಿತ್ತು. ವರದಿ ಸಿದ್ಧಪಡಿಸಲು ಡಾ ಸಪ್ನಾ ಮುಖರ್ಜಿ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಅದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.
ಆರಂಭದಲ್ಲಿ ಖಾಸಗಿ ವಲಯಕ್ಕೆ ಮುಟ್ಟಿನ ರಜೆ ನೀತಿ ಪರಿಚಯಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಪೂರ್ಣ ಪ್ರಮಾಣದಲ್ಲಿ ನೀತಿ ರೂಪಿಸಿದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ.
ಉದ್ಯೋಗದಾತರು ಮುಟ್ಟಿನ ರಜೆ ನೀಡುವುದನ್ನು ಕಡ್ಡಾಯಗೊಳಿಸುವುದರಿಂದ ಮಹಿಳೆಯರಿಗೆ ಅನುಕೂಲವಾಗಬೇಕು. ಅದರ ಬದಲಿಗೆ ಮುಟ್ಟಿನ ರಜೆ ನೀಡುವುದರಿಂದ ಉದ್ಯೋಗಗಳಲ್ಲಿ ಅವರ ಭಾಗವಹಿಸುವಿಕೆಗೆ ಪ್ರತಿಕೂಲವಾಗದಂತೆ ಗಮನಹರಿಸಬೇಕು ಎಂದು ಕೋರ್ಟ್ ಹೇಳಿತ್ತು.
ಬಿಹಾರವು 1992 ರಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಘೋಷಿಸಿತ್ತು. ಆ ಮೂಲಕ ಮುಟ್ಟಿನ ರಜೆ ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಿತ್ತು. ಜಾಗತಿಕವಾಗಿ ಸ್ವೀಡನ್, ಇಟಲಿ, ದಕ್ಷಿಣ ಕೊರಿಯಾ, ತೈವಾನ್ ಮತ್ತು ಜಪಾನ್ ಮಹಿಳೆಯರಿಗೆ ಮುಟ್ಟಿನ ರಜೆಗಳನ್ನು ನೀಡುತ್ತಿವೆ.
