
ಬೆಂಗಳೂರು: ಸಿಲಿಕಾನ್ ಸಿಟಿ ಜನತೆಯನ್ನು ಬೆಚ್ಚಿಬೀಳಿಸಿದ ಮಹಾಲಕ್ಷ್ಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್, ಕೃತ್ಯವೆಸಗಿರುವ ವ್ಯಕಿ ಯಾರೆಂದು ಗೊತ್ತಾಗಿದೆ. ಆರೋಪಿ ಬೆಂಗಳೂರಿನವನಲ್ಲ, ಹೊರ ರಾಜ್ಯದವನು ಇಲ್ಲಿ ಬಂದು ವಾಸವಾಗಿದ್ದ.
ಶೀಘ್ರದಲ್ಲಿ ಆತನನ್ನು ಬಂಧನ ಮಾಡಿ ವಿಚಾರಣೆಗೆ ಒಳಪಡಿಸುತ್ತೇವೆ. ನಂತರ ಉಳಿದ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು.
ಘಟನೆ ಏನು: ಮಲ್ಲೇಶ್ವರಂ ಪ್ರದೇಶದ ವೈಯಾಲಿಕಾವಲ್‌ನ ಮುನ್ನೇಶ್ವರ ಬ್ಲಾಕ್‌ನಲ್ಲಿರುವ ಮೊದಲ ಮಹಡಿಯ ಮನೆಯೊಂದರಲ್ಲಿ 26 ವರ್ಷದ ಮಹಿಳೆಯ ಮೃತದೇಹವನ್ನು ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟಿರುವ ಘಟನೆ ಮೂರು ದಿನಗಳ ಹಿಂದೆ ನಡೆದಿತ್ತು. ಕಳೆದ 19 ದಿನಗಳ ಹಿಂದೆಯೇ ಆಕೆಯನ್ನು ಹತ್ಯೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಕೆ ವಿವಾಹಿತೆಯಾಗಿದ್ದಳು. ಆಕೆ, ಹುಕುಂ ಸಿಂಗ್ ಎಂಬಾತನನ್ನು ಮದುವೆಯಾಗಿದ್ದಳು.ಆ ದಂಪತಿಗೊಂದು ಮಗುವೂ ಇದೆ. ಆದರೆ, ಆಕೆ ತನ್ನ ಪತಿ ಹಾಗೂ ಮಗುವನ್ನು ತೊರೆದಿದ್ದಳು. ಪತಿ ಹಾಗೂ ಮಗುವನ್ನು ತೊರೆದ ನಂತರ ಆಕೆ ವೈಯ್ಯಾಲಿ ಕಾವಲ್ ನಲ್ಲಿ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದೆ.
ಈ ಮೊದಲು ದಂಪತಿಯಿಬ್ಬರೂ ಬೆಂಗಳೂರಿನ ಮುನೇಶ್ವರನಗರದಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು.
