
ಬೆಂಗಳೂರು: ಅ. 23, 24 ಮತ್ತು 25ರಂದು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ “ಕಿತ್ತೂರು ವಿಜಯ ಉತ್ಸವ” ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗ ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರು ವಿಜಯ ಜ್ಯೋತಿ ಯಾತ್ರೆ ಇಂದಿನಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಿತ್ತೂರು ತಲುಪಲಿದೆ. ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ನೆರವು ನೀಡುತ್ತಿದ್ದೇವೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರೊಂದಿಗೆ ಹೋರಾಡಿ ವಿಜಯಶಾಲಿಯಾದರು. ಈ ಯದ್ಧ ನಡೆದು 200 ವರ್ಷಗಳಾಗಿವೆ. ಹೀಗಾಗಿ ವಿಜಯೋತ್ಸವ ಆಚರಣೆ ಮಾಡುತ್ತಿದ್ದೇವೆ ಎಂದರು.
ಬ್ರಿಟಿಷರು ಜಾರಿಗೆ ತಂದಿದ್ದ ತೆರಿಗೆ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಕಿತ್ತೂರು ರಾಣಿ ಚೆನ್ನಮ್ಮ ಅವರು ವಿರೋಧ ಮಾಡಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರಿಗೆ ತೆರಿಗೆ ಕೊಡಲ್ಲ ಅಂತ ನೇರವಾಗಿ ಹೇಳಿದ್ದರು ಎಂದು ಸಿಎಂ ನೆನಪು ಮಾಡಿಕೊಂಡರು.
ದೇಶದ ಎಲ್ಲ ರಾಣಿಯರಗಿಂತ ಕಿತ್ತೂರು ರಾಣಿ ಚೆನ್ನಮ್ಮ ಮುಂಚೂಣಿಯಲ್ಲಿರುತ್ತಾರೆ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ನೋಡಿ ದೇಶ, ನಾಡಿನ ಪ್ರೇಮ ಮತ್ತು ಸ್ವಾಭಿಮಾನವನ್ನು ಕಲಿಯಬೇಕು ಎಂದರು.
ಇದೇ ವೇಳೆ ಕಿತ್ತೂರು ಉತ್ಸವದ ಪೋಸ್ಟರ್ ಕೂಡ ಬಿಡುಗಡೆ ಮಾಡಿದರು.
