
ಮಂಗಳೂರು: ರಾಮ ಮಂದಿರದ ಮಾದರಿಯಲ್ಲಿ ಎಲ್ಲ ದೇವಾಲಯಗಳಿಗೆ ಪ್ರತ್ಯೇಕ ವಿಶ್ವಸ್ಥ ಮಂಡಳಿ ರೂಪುಗೊಳ್ಳಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದರು.
ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಹಿಂದೂ ದೇವಾಲಯಗಳು ಇನ್ನೂ ಸರಕಾರದ ವಶದಲ್ಲಿವೆ. ಪ್ರಾಚೀನ ದೇವಾಲಯಗಳನ್ನೇ ಸರಕಾರ ತನ್ನ ವಶದಲ್ಲಿ ಇರಿಸಿಕೊಂಡಿದೆ. ಸರಕಾರದ ಹಿಡಿತದಿಂದ ದೇಗುಲಗಳು ಮುಕ್ತಗೊಳ್ಳುವ ಅಗತ್ಯ ಇದೆ ಎಂದರು.
ಸರಕಾರದ ವಶದಲ್ಲಿರುವ ದೇವಾಲಯಗಳನ್ನು ಹಿಂದೂ ವಶಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಅದರ ಹೊರತಾಗಿಯೂ ಇದುವರೆಗೆ ಯಾವುದೇ ದೇವಾಲಯಗಳನ್ನು ಸರಕಾರ ತನ್ನ ಹಿಡಿತ ದಿಂದ ಮುಕ್ತಗೊಳಿಸಿಲ್ಲ.
ಇತರ ಧರ್ಮೀಯರ ಆರಾಧನ ಸ್ಥಳಗಳು ಅವರ ಹಿಡಿತದಲ್ಲಿವೆ. ದೇವಸ್ಥಾನಗಳು ಸರಕಾರ ವಶದಲ್ಲಿರುವುದರಿಂದಲೇ ಶ್ರದ್ಧಾ ಕೇಂದ್ರ ಗಳಿಗೆ ಅಪಚಾರಗಳು ಉಂಟಾಗುತ್ತಿವೆ. ಹಿಂದೂಗಳೇ ಶ್ರದ್ಧಾ ಕೇಂದ್ರಗಳನ್ನು ನಡೆಸಿದರೆ ಯಾವುದೇ ಅಪಚಾರಗಳು ಉಂಟಾಗಲು ಅವಕಾಶ ಇರುವುದಿಲ್ಲ ಎಂದರು.
