
ಮಂಗಳೂರು: ಕೂಳೂರಿನ ಸೇತುವೆಯ ಸಮೀಪವೇ ಇರುವ ಮತ್ತೊಂದು ಸೇತುವೆ ಬಳಿ
ಮಾಜಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ಅವರ ಶವ ಪತ್ತೆಯಾಗಿದೆ.
ಫಲ್ಗುಣಿ ನದಿಯ ನೀರಿನಿಂದ ಶವವನ್ನು ಈಗ ಮೇಲಕ್ಕೆ ಎತ್ತಲಾಗಿದೆ. ಮುಮ್ತಾಜ್ ಅಲಿ ಅವರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.
ಮುಮ್ತಾಜ್ ಅಲಿ ಫಿಶ್‌ಮಿಲ್, ಕಾಲೇಜು ಸೇರಿದಂತೆ ಹಲವು ಉದ್ಯಮ ನಡೆಸಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಮುಮ್ತಾಜ್ ಅಲಿ ಶನಿವಾರ ರಾತ್ರಿ ಮನೆಯವರೊಂದಿಗೆ ಮುನಿಸಿಕೊಂಡು ಮಾತುಕತೆ ನಡೆಸಿದ್ದರು.
ಭಾನುವಾರ ಬೆಳಗ್ಗಿನ ಜಾವ 3 ಗಂಟೆಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು ಚಲಾಯಿಸಿಕೊಂಡು ಕದ್ರಿಯ ತನ್ನ ಮನೆಯಿಂದ ಪಣಂಬೂರು ಬಳಿ ಬಂದಿದ್ದರು. ಅಲ್ಲಿಂದ ವೇಗವಾಗಿ ಕೂಳೂರು ಹೈವೇಯಲ್ಲಿ ಬರುತ್ತಿದ್ದಾಗ ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದ್ದರು ಎಂದು ತಿಳಿದು ಬಂದಿದೆ.
ಅಲ್ಲಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಫಲ್ಗುಣಿ ನದಿಯಲ್ಲಿ ಮುಮ್ತಾಜ್ ಅಲಿಗಾಗಿ ಶೋಧ ಕಾರ್ಯ ನಡೆಸಿತ್ತು.
ಏನಿದು ಘಟನೆ: ಮುಮ್ತಾಜ್ ಅಲಿ ಆತ್ಮಹತ್ಯೆ ಹಿಂದೆ ಅದೊಂದು ಮಹಿಳೆಯ ಕೈವಾಡ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸುರತ್ಕಲ್ ಕೃಷ್ಣಾಪುರ ನಿವಾಸಿ ಮಹಿಳೆ ಕಳೆದ ಒಂದು ವರ್ಷದಿಂದ ಮುಮ್ತಾಜ್ ಅಲಿ ಅವರ ಖಾಸಗಿ ವಿಡಿಯೋ ಇಟ್ಟುಕೊಂಡು ಮದುವೆ ಆಗುವಂತೆ ಮಹಿಳೆ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ.
ಈ ವಿಚಾರ ಮುಮ್ತಾಜ್ ಅಲಿ ಮನೆಯವರಿಗೆ ಗೊತ್ತಾಗಿ ನಿತ್ಯ ಕಿರಿಕಿರಿಯಾಗುತ್ತಿತ್ತು. ಇತ್ತೀಚಗೆ ಮಸೀದಿ ಕಮಿಟಿ ವಿಚಾರದಲ್ಲಿ ಕಾಟಿಪಳ್ಳದ ಮೂವರು ಯುವಕರು ಆ ಮಹಿಳೆಗೆ ಸಾಥ್ ನೀಡಿ ಹೆಸರು ಕೆಡಿಸಲು ತಯಾರಿ ನಡೆಸಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
ಮಹಿಳೆ ಸೇರಿ 6 ಮಂದಿ ವಿರುದ್ಧ ಎಫ್ಐಆರ್: ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮುಮ್ತಾಜ್ ಆಲಿ ಸಹೋದರ ಹೈದರ್ ದೂರು ಆಧರಿಸಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್ ಹಾಗೂ ಸಿರಾಜ್ ವಿರುದ್ದ ಎಫ್ಐಆರ್ ದಾಖಲಾಗಿದೆ.
