
ಮಂಗಳೂರು: ಸ್ಟಾರ್ ನಟ ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ವಾಪಸ್ ಆಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ದೈವದ ಆಶೀರ್ವಾದ ಇಲ್ಲದೇ ಇದ್ದರೆ ನಾವು ಹೋಗಲು ಸಾಧ್ಯವೇ ಇರಲಿಲ್ಲ. ದೈವದ ಆಶೀರ್ವಾದದಿಂದ ಕಾಂತಾರ ಚಿತ್ರ ಇಲ್ಲಿ ತನಕ ಬಂದಿದೆ. ಈ ಪ್ರಶಸ್ತಿಯನ್ನು ದೈವದ ಪಾದಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದರು.
ನ್ಯಾಷನಲ್ ಅವಾರ್ಡ್ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ಈ ಚಿತ್ರವು ದೈವದ ಬಗ್ಗೆ ಹಾಗೂ ದೈವ ನರ್ತಕರ ಸಮುದಾಯದ ಬಗ್ಗೆ ಇರುವ ಸಿನಿಮಾವಾಗಿದೆ. ನ್ಯಾಷನಲ್ ಅವಾರ್ಡ್ ಕ್ರೆಡಿಟ್ ಅನ್ನು ದೈವ ನರ್ತಕ ಸಮುದಾಯಕ್ಕೆ ಸೇರಬೇಕು. ಇದು ಎಲ್ಲಾ ಅಭಿಮಾನಿಗಳ ಪ್ರೀತಿಯಿಂದ ಸಾಧ್ಯವಾಗಿದೆ ಎಂದಿದ್ದಾರೆ.
‘ಕಾಂತಾರ’ ಮಂಗಳೂರಿನಲ್ಲಿ ಶುರುವಾದ ಸಿನಿಮಾ. ಇಲ್ಲಿಯೇ ಕಥೆ ಶುರುವಾಗಿದ್ದು, ಪ್ರಶಸ್ತಿಯೂ ಇಲ್ಲಿಗೆ ಬಂದಿದೆ ಎಂದಿದ್ದಾರೆ. ಕಾಂತಾರದ ಇಡೀ ತಂಡವಾಗಿ ನಾವು ಕುಂದಾಪುರದಲ್ಲಿ ನೆಲೆಸಿದ್ದೇವೆ. ಈ ಪ್ರಶಸ್ತಿಯನ್ನ ದೈವಕ್ಕೆ, ದೈವ ನರ್ತಕರಿಗೆ ಹಾಗೂ ಅಪ್ಪು ಸರ್‌ಗೆ ಸಮರ್ಪಿಸುತ್ತೇನೆ.
ಯಾವ ಮೂಲದಿಂದ ಬಂದಿದ್ದೇವೋ ಅದನ್ನ ಮರೆಯಬಾರದು ಈ ಪ್ರಶಸ್ತಿಯನ್ನ ದೈವದ ಪಾದಕ್ಕೆ ಇಟ್ಟು ನನ್ನ ಕೆಲಸ ಮುಂದುವರೆಸುತ್ತೇನೆ ಎಂದಿದ್ದಾರೆ.
