
ಉಡುಪಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಶಿವಾಜಿ ಮಹಾರಾಜರಷ್ಟೇ ಪೂಜ್ಯರು, ಪ್ರಾತಃ ಸ್ಮರಣೀಯರು. ಅವರ ಸಾಮಾಜಿಕ ಕ್ರಾಂತಿಯಿಂದ ಪ್ರೇರಣೆಯನ್ನು ಪಡೆದು ನಾವು ಕೂಡ ಸಮಾಜಮುಖಿಯಾಗಿ ಕಾರ್ಯ ಚಟುವಟಿಕೆ ನಡೆಸುತ್ತಿದ್ದೇವೆ.
ನನ್ನ ಮಾತಿನ ಬಗ್ಗೆ ನನಗೂ ಕೂಡ ಅತೀವ ಬೇಸರವಾಗಿದೆ. ನನ್ನ ಈ ಮಾತಿನಿಂದ ನೊಂದಿರುವ ಸಮಸ್ತ ನಾಗರೀಕರ ಬಳಿ ನಾನು ಬೇಷರತ್ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಈ ಮಾತನ್ನು ವಾಪಾಸು ಪಡೆದುಕೊಳ್ಳುತ್ತಿದ್ದು, ಮುಂದೆ ಎಂದೂ ಈ ರೀತಿಯ ಅಚಾತುರ್ಯವಾಗದಂತೆ ಎಚ್ಚರ ವಹಿಸುತ್ತೇನೆ ಎಂದು ಉಮೇಶ್ ನಾಯ್ಕ್ ಸೂಡ ಕ್ಷಮೆಯಾಚಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ನಮ್ಮ ಸಮುದಾಯದ ವಾಟ್ಸಪ್ ಗ್ರೂಪ್ ಒಂದರಲ್ಲಿ ಒಂದು ಕಾರ್ಯಕ್ರಮದ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು. ಮರಾಠಿ ನಾಯ್ಕ್ ಸಮಾಜದ ಗದ್ದುಗೆ ಸಮಾವೇಶವನ್ನು ಮೂಡಬಿದ್ರೆಯಲ್ಲಿ ನಡೆಸುವುದೆಂದು ಮರಾಠಿ ಮುಖಂಡರು ನಿಶ್ಚಯಿಸಿದ್ದರು. ನಮ್ಮ ಈ ಹಿಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ಕುಲಗುರುಗಳು ಆಗಿರುವ ಶೃಂಗೇರಿ ಶ್ರೀಗಳ ಚಿತ್ರ ಮತ್ತು ಸಮಸ್ತ ಭಾರತವಾಸಿಗಳಿಗೆ ಪ್ರೇರಣಾಸ್ತೋತೃವಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರಗಳನ್ನು ಅಗತ್ಯವಾಗಿ ಬಳಸುತ್ತಿದ್ದೆವು. ಆದರೆ ಈ ಬಾರಿ ಕೆಲವು ರಾಜಕೀಯ ವ್ಯಕ್ತಿಗಳನ್ನು ಮೆಚ್ಚಿಸುವ ಉದ್ಧೇಶದಿಂದ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಆಮಂತ್ರಣ ಪತ್ರಿಕೆಯಿಂದ ಕೈ ಬಿಡಲಾಗಿದೆ.
ಭಾರತದ ಇತಿಹಾಸದಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿರುವ ಹಿಂದೂ ಹಿತರಕ್ಷಕ, ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ತನ್ನ ಆಯುಷ್ಯ ಸವೆಸಿದ ಮಹಾನ್ ಚೇತನ ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಪೂರ್ವಜರು ಎನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಆದರೆ ಅವರನ್ನೇ ಕೈಬಿಟ್ಟಿರುವ ಹಿಂದಿನ ಷಡ್ಯಂತ್ರವೇನು? ಈ ಬಗ್ಗೆ ನನ್ನದು ಬಲವಾದ ವಿರೋಧವಿತ್ತು.
ಸಂಘಟನೆ ತಳೆದಿರುವ ಈ ನಿಲುವಿನ ವಿರುದ್ಧ ನಮ್ಮ ಸಮುದಾಯದ ನೂರಾರು ಜನರು ನನಗೆ ಕರೆಯನ್ನು ಮಾಡಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾನು ಆಯೋಜಕರಿಗೆ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಅಳವಡಿಸಲೇಬೇಕು ಎಂದು ಕಳೆದ ಒಂದು ತಿಂಗಳಿನಿಂದ ಮನವಿ ಮಾಡುತ್ತಲೇ ಬಂದಿದ್ದೇನೆ. ಆದರೆ ನನ್ನ ಮಾತಿಗೆ ಅವರು ಯಾವುದೇ ರೀತಿಯ ಬೆಲೆಯನ್ನು ಕೊಡಲಿಲ್ಲ. ಇದು ಕೇವಲ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರದ ಬದಲಾವಣೆಯಾಗಿರದೆ ಇಡೀ ಮರಾಠಿ ನಾಯ್ಕ್ ಸಂಘಟನೆ ಹಿಂದೂ ವಿರೋಧಿ ಶಕ್ತಿಗಳ ಕೈಗೆ ಜಾರುತ್ತಿರುವ ಮುನ್ಸೂಚನೆಯಾಗಿತ್ತು.
ಹೀಗಾಗಿ ಕಾರ್ಯಕ್ರಮದ ಆಯೋಜಕರು ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವನ್ನು ಹಾಕಿದರು. ಅಂಬೇಡ್ಕರ್ ಚಿತ್ರವನ್ನು ಹಾಕಿರುವುದಕ್ಕೆ ನನ್ನದೇನೂ ಆಕ್ಷೇಪವಿರಲಿಲ್ಲ. ಆದರೆ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಕೈ ಬಿಟ್ಟಿದ್ದು ನಮಗೆ ಅತೀವ ನೋವನ್ನುಂಟು ಮಾಡಿತ್ತು. ಈ ಬಗ್ಗೆ ಚರ್ಚೆ ನಡೆಯುವ ವೇಳೆ ಸಿಟ್ಟಿನ ಭರದಲ್ಲಿ ಕೆಲವು ಅಪಶಬ್ದಗಳು ನನ್ನ ಬಾಯಿಯಿಂದ ಬಂದಿವೆ. ಈ ಚರ್ಚೆ ನಮ್ಮ ಆಂತರಿಕ ವಲಯದ ಚರ್ಚೆಯಾಗಿದ್ದು, ಆದರೆ ಅದನ್ನು ಉದ್ಧೇಶಪೂರ್ವಕವಾಗಿ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಿಗೆ ಹರಡಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ.
ಆದರೆ ಈ ಘಟನೆಯನ್ನು ಎರಡು ಸಮಾಜಗಳ ಮದ್ಯೆ ಒಡಕು ಮೂಡಿಸಲು ಬಳಸಿಕೊಂಡಿರುವ ಮತ್ತು ನಮ್ಮ ಸಮುದಾಯವನ್ನು ಹಿಂದೂ ಜೀವನಧಾರೆಯಿಂದ ಪ್ರತ್ಯೇಕಿಸುವ ಪ್ರಯತ್ನದಲ್ಲಿ ನಿರತರಾಗಿರುವ ನಮ್ಮ ಸಮಾಜದ ಕೆಲವು ಸ್ವಾರ್ಥಿ ನಾಯಕರ ವಿರುದ್ಧ ನನ್ನ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
