
ಕುಂದಾಪುರ: ಕೋಣಿ ಸಮೀಪದ ಬ್ಯಾಂಕ್ ಒಂದರಲ್ಲಿ ತಡರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ.
ಎಟಿಎಂಗೆ ನುಗ್ಗಿ ಯಂತ್ರ ತೆರೆಯಲು ನೋಡಿದಾಗ ಹೈದರಾಬಾದ್‌ನಿಂದ ಸೆಕ್ಯುರಿಟಿ ಸಂಸ್ಥೆಯವರು ಈ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ.
ಏನಿದು ಘಟನೆ: ರಾತ್ರಿ 1.30ರ ಸುಮಾರಿಗೆ ಕೋಣಿ ಸಮೀಪದ ಬ್ಯಾಂಕ್‌ನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಇಬ್ಬರು ವ್ಯಕ್ತಿಗಳು ಬ್ಯಾಂಕಿನ ಒಳಗೆ ಪೂರ್ತಿ ಜಾಲಾಡಿ, ಲಾಕರ್ ತೆರೆಯುವ ಪ್ರಯತ್ನ ಮಾಡಿದ್ದೂ ಅದು ಸಾಧ್ಯವಾಗದೆ ಕೊನೆಗೆ ಅದಕ್ಕೆ ಅಂಟಿಕೊಂಡಂತಿದ್ದ ಎಟಿಎಂಗೆ ಪ್ರವೇಶಿಸಿ ಯಂತ್ರವನ್ನು ತೆರೆಯಲು ಯತ್ನಿಸಿದಾಗ ಸೈರನ್ ಮೊಳಗಿದೆ. ಸೈರನ್ ಆದ ಕಾರಣ ಕಳ್ಳರು ಪರಾರಿಯಾಗಿದ್ದಾರೆ.
ಎಟಿಎಂಗಳನ್ನು ನಿರ್ವಹಿಸುವ ಸಂಸ್ಥೆಯ ಭದ್ರತೆ ನಿಗಾ ವಹಿಸುವವರು ಹೈದರಾಬಾದ್‌ನಲ್ಲಿ ಸಿಸಿ ಟಿವಿ ಮಾನಿಟರಿಂಗ್ ಮಾಡುತ್ತಿದ್ದು, ಅವರ ಗಮನಕ್ಕೆ ಬಂದು ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ಪರಿಶೀಲನೆ ತಂಡ ಹಾಗೂ ಸೊಕೊ (ಸೀನ್ ಆಫ್ ಕ್ರೈಂ) ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
