
ಉಡುಪಿ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನ ವತಿಯಿಂದ ನ.1ರಿಂದ ನ.7 ರವರೆಗೆ “ಕನ್ನಡ ಹಬ್ಬ ಸಪ್ತಾಹ”ವನ್ನು ಕುಂದಾಪುರದಲ್ಲಿ ಆಯೋಜಿಸಲಾಗಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗುವುದು. ಹಾಗೂ ಅ.31ರಂದು ‘ಕನ್ನಡ ರಥೋತ್ಸವ’ ಎಂಬ ಪುರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಸಾಪ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವರು, ರಾಜಕೀಯ ಮುಖಂಡರು ಭಾಗವಹಿಸಲಿದ್ದು, 3 ಸಾವಿರಕ್ಕೂ ಅಧಿಕ ಮಂದಿ ಈ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.
ವಿವಿಧ ಕಲಾತಂಡಗಳು, ಭಜನಾ ತಂಡಗಳು, ಬೆಂಕಿಯಾಟ, ಅನ್ಯ ಭಾಷಿಕರ ತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಲಿವೆ ಎಂದರು. ಕುಂದಾಪುರ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬರಲಿದ್ದು, ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ನ.1 ರಿಂದ 7 ರವರೆಗೆ ಪ್ರತಿದಿನ ಸಂಜೆ 6ರಿಂದ ಕನ್ನಡದ ನೆಲೆಯಲ್ಲಿ ಕನ್ನಡ ಭಾಷೆಯಲ್ಲಿ ಕೊಡುಗೆ ನೀಡಿದವರ ಉಪನ್ಯಾಸ ಕಾರ್ಯಕ್ರಮ ಹಾಗೂ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.
ನ. 7 ರಂದು ಪ್ರಾಣೇಶ್ ಗಂಗಾವತಿ ಅವರಿಂದ ಹಾಸ್ಯದ ಹೊನಲು ನಡೆಯಲಿದೆ. ಮೊದಲ ಐದು ಕಾರ್ಯಕ್ರಮ ರೋಟರಿ ಸಭಾಭವನ ಹಾಗೂ ಎರಡು ದಿನದ ಕಾರ್ಯಕ್ರಮ ಜೂನಿಯರ್ ಕಾಲೇಜಿನ ಬಯಲು ಮಂದಿರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
