
ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯಪುರದ ಗಾಂಧಿ ಚೌಕ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಾಚ್ಯ ಪದಬಳಸಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ದೂರು ದಾಖಲಾಗಿದೆ.
ಪಾಲಿಕೆ ನಾಮನಿರ್ದೇಶಿತ ಸದಸ್ಯ ಪರಶುರಾಮ ಹೊಸಮನಿ ಎಂಬುವರು ದೂರು ನೀಡಿದ್ದಾರೆ.
ಘಟನೆ ಏನು: ಅಕ್ಟೋಬರ್ 15 ವಿಜಯಪುರದ ಸಿದ್ದೇಶ್ವರ ಗುಡಿ ಹತ್ತಿರ ನಡೆದ “ವಕ್ಫ್ ಹಠಾವೋ ದೇಶ ಬಚಾವೋ” ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಭರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮುಸ್ಲಿಂ ಧರ್ಮಕ್ಕೆ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾರ್ವಜನಿಕವಾಗಿ ಇತರೆ ಧರ್ಮದವರನ್ನು ಹಿಯ್ಯಾಳಿಸಿ ಮಾತನಾಡಿ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಎಲ್ಲರಿಗೂ ಮಾನಸಿಕ ನೋವನ್ನುಂಟು ಮಾಡಿದ್ದಾರೆ. ಶಾಂತಿ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದ ಈ ರೀತಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ರ (U/s-352,353(2)) ಕಲಂ ಅಡಿ ದೂರು ದಾಖಲಿಸಲಾಗಿದೆ.
