
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಂಟ್ವಾಳ ಬಿ. ಕಸಬಾ ಗ್ರಾಮ ನೆಹರೂ ನಗರದ ಅಬುತಾಹಿರ್ ಆಲಿಯಾಸ್ ಶಾಝಿಲ್(20) ಶಿಕ್ಷೆಗೊಳಗಾದ ಆರೋಪಿ.
ಘಟನೆ ವಿವರ: ಆರೋಪಿ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿಯ ಪರಿಚಯವಾಗಿ ಫೋನ್ ಮೂಲಕ ಸಂರ್ಪಕದಲ್ಲಿದ್ದು, 2023ರ ಜೂ. 22ರಂದು ಮಡಂತ್ಯಾರಿನಲ್ಲಿ ಭೇಟಿಯಾಗೋಣ ಎಂದು ಹೇಳಿದ್ದು, ಆ ದಿನ ಶಾಲೆಗೆಂದು ಮನೆಯಿಂದ ಹೊರಟು ಬಂದ ಬಾಲಕಿಯನ್ನು ಆರೋಪಿ ಮಡಂತ್ಯಾರಿನಲ್ಲಿ ಭೇಟಿಯಾಗಿದ್ದ.
ಬಲವಂತದಿಂದ ಮಂಗಳೂರಿಗೆ ಕರೆದುಕೊಂಡು ಬಂದು ಅಲ್ಲಿಂದ ಗೋವಾಕ್ಕೆ ಹೋಗಲು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ರಾತ್ರಿ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 3ರಲ್ಲಿ ತಂಗಿದ್ದ ಮಂಗಳೂರು ಮಡಗಾಂವ್ ರೈಲಿನ ಯಾರೂ ಇಲ್ಲದ ಬೋಗಿಯ ಒಳಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದ.
ಇದೆ ವೇಳೆ ಬಾಲಕಿ ಕಾಣೆಯಾದ ಬಗ್ಗೆ ಆಕೆಯ ತಾಯಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರಾತ್ರಿ 12ಕ್ಕೆ ಬಾಲಕಿ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ತನ್ನ ತಾಯಿಗೆ ಕರೆ ಮಾಡಿದ್ದಳು. ಈ ವಿಷಯವನ್ನು ತಾಯಿ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಬಂದು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಅಭಿಯೋಜನೆ ಪರ ಒಟ್ಟು 17 ಸಾಕ್ಷಿದಾರರನ್ನು ವಿಚಾರಿಸಿ 31 ದಾಖಲೆಗಳನ್ನು ಗುರುತಿಸಿ ಆರೋಪಿತನ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ಅ. 28ರಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
20 ವರ್ಷ ಜೈಲು ಮತ್ತು ಒಟ್ಟು 60,000 ರೂ. ದಂಡ ವಿಧಿಸಿದ್ದಾರೆ. ದಂಡದ ಹಣವಾದ 50,000 ರೂ.ಗಳನ್ನು ನೊಂದ ಬಾಲಕಿಗೆ ಪಾವತಿಸುವಂತೆ ಆದೇಶಿಸಿದ್ದಾರೆ.
