
ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಲೋಕ ಕಲ್ಯಾಣಾರ್ಥ ಮತ್ತು ಸಾನಿಧ್ಯ ವೃದ್ಧಿಗಾಗಿ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞ ಪ್ರಯುಕ್ತ ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪಕ್ಕೆ ಶ್ರೀ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ದಾರಿ ತಪ್ಪುತ್ತಿರುವ ಯುವ ಪೀಳಿಗೆಗ ಲೇಖನ ಯಜ್ಞ ಅನಿವಾರ್ಯ. ಧರ್ಮ ಮತ್ತು ದೇವರ ಬಗೆಗಿನ ಭಕ್ತಿಯು ನಮ್ಮನ್ನು ಸರಿ ದಾರಿಯತ್ತ ನಡೆಯಲು ಪ್ರೇರಕವಾಗಿದೆ ಎಂದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ಲೇಖನ ಯಜ್ಞದ ಪ್ರತಿ ಅಕ್ಷರದಲ್ಲೂ ದೇವರ ಸಾನಿಧ್ಯವಿದೆ. ಅಕ್ಷರದ ಮೂಲಕ ತಾಯಿಯ ಆರಾಧನೆ ನಡೆಯಲಿದೆ. ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮ ಹಾಗೂ ಪುಸ್ತಕ ಬರೆಸುವ ಸಂಕಲ್ಪದ ಬಗ್ಗೆ ಮಾತನಾಡಿದ ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯು ಜಂಟಿಯಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ 99,999 ಮಂದಿಯಿಂದ ಪುಸ್ತಕ ಬರೆಸುವ ಸಂಕಲ್ಪವಿದೆ.
ರೂ. 199/- ಪಾವತಿಸಿ ನವದುರ್ಗಾ ಲೇಖನ ಬರೆಯಲು ಭಕ್ತರು ಹೆಸರು ನೋಂದಾವಣೆ ಮಾಡಿಕೊಂಡು ಪುಸ್ತಕ ಪಡೆಯಬಹುದು ಎಂದರು.
ಪ್ರಪಂಚದಾದ್ಯಂತ ಇರುವ ಭಕ್ತರಿಂದ ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗುತ್ತಿದೆ. ನೋಂದಾವಣೆ ಮಾಡಿದ ಭಕ್ತರಿಗೆ ಅ. 29ರಿಂದ ಪುಸ್ತಕ ನೀಡಲಾಗುತ್ತದೆ. ಲೇಖನ ಪುಸ್ತಕ ವಿತರಣೆಯ ಬಳಿಕ 45 ದಿನಗಳ ಒಳಗಾಗಿ ನವದುರ್ಗಾ ಲೇಖನವನ್ನು ಬರೆದು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪುಸ್ತಕವನ್ನು ಮರಳಿಸಬೇಕು.
2025ರ ಫೆ. 4ರಂದು ನಡೆಯುವ ನವಚಂಡಿಕಾಯಾಗದಲ್ಲಿ ಎಲ್ಲಾ ಪುಸ್ತಕಗಳನ್ನು ಪೂಜೆಗೆ ಇರಿಸಿ, ಲೇಖನ ಬರೆದವರ ಹೆಸರು, ರಾಶಿ, ನಕ್ಷತ್ರವನ್ನು ಸಂಕಲ್ಪಿಸಿ ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ. ಭಕ್ತರು ಬರೆದ ಹಸ್ತಾಕ್ಷರದ ಪುಸ್ತಕ ಸಾನಿಧ್ಯದಲ್ಲಿ ಇರುವುದಲ್ಲದೆ ಪ್ರತೀ ವರ್ಷ ನವರಾತ್ರಿಯ ಒಂದು ದಿನ ಅದಕ್ಕೆ ವಾಗೀಶ್ವರಿ ಪೂಜೆ ನೆರವೇರುತ್ತದೆ ಎಂದು ವಿವರಿಸಿದರು.
ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ವೇ.ಮೂ.ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.
ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ರಾಮಯ್ಯ, ಲೇಖಕಿ ವೀಣಾ ಬನ್ನಂಜೆ, ಪಡುಬಿದ್ರಿ ಪಂಚಕಾಡು ಕೊರಗ ಕುಟುಂಬ ಗುರಿಕಾರ ಬಾಲರಾಜ್ ಕೋಡಿಕಲ್, ಶಿಕ್ಷಣ ತಜ್ಞೆ ಮಾಲಿನಿ ಹೆಬ್ಬಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯಾಧ್ಯಕ್ಷ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್., ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ರವಿಕಿರಣ್ ಕೆ., ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಕೆ.ಮನೋಹರ ಎಸ್. ಶೆಟ್ಟಿ, ಮಾಧವ ಆರ್.ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಮಲ್ಲಾರು, ಹುಬ್ಬಳ್ಳಿ ಸಮಿತಿಯ ಸುಗ್ಗಿ ಸುಧಾಕರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಉಪಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್, ಡಾ.ವಿದ್ಯಾ ಶಂಕರ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಕೆ. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಮಂಜ, ಸುವರ್ಧನ್ ನಾಯಕ್ ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು. ನವದುರ್ಗಾ ಲೇಖನ ಸಮಿತಿ ಕಾರ್ಯಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ವಂದಿಸಿ, ದಾಮೋದರ ಶರ್ಮ ನಿರೂಪಿಸಿದರು.
