
ಉಡುಪಿ: ನಮ್ಮ ಸರಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಭೂಮಿ ಒತ್ತುವರಿ ಆಗಿರುವುದಕ್ಕೆ ಕಂದಾಯ ಸಚಿವಾಲಯ ನೋಟಿಸ್ ಕೊಟ್ಟಿದೆ. ಇದನ್ನೇ ಗುರಿಯಾಗಿಸಿಕೊಂಡು ವಕ್ಫ್ ಸೊತ್ತು ರಾಷ್ಟ್ರೀಕರಣ ಮಾಡಬೇಕು ಎನ್ನುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಿಡಿಕಾರಿದ ಅವರು ವಕ್ಫ್ ಸೊತ್ತುಗಳನ್ನು ರಾಷ್ಟ್ರೀಕರಣಗೊಳಿಸಿ ಎನ್ನುವುದು ಸರಿಯಲ್ಲ.
ಯತ್ನಾಳ್ ಅವರಿಗೆ ಹಿಂದೂ – ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ . ಅದನ್ನು ಹೇಳಿಕೊಂಡೇ ಅವರು ಗೆದ್ದುಕೊಂಡು ಬಂದವರು. ಮಹಾತ್ಮ ಗಾಂಧಿ, ಡಾ| ಅಂಬೇಡ್ಕರ್ ಹೇಳಿ ಕೊಟ್ಟಂತೆ ಬದುಕುವವರು ನಾವು ಎಂದರು.
ನವೆಂಬರ್ ತಿಂಗಳಲ್ಲಿ ಕೆಡಿಪಿ ಸಭೆ ನಡೆಸಲಿದ್ದೇವೆ. ಹಾಗೆಯೇ ಜಿಲ್ಲೆಯಲ್ಲಿ ಶೀಘ್ರವೇ ಜನತಾ ದರ್ಶನ ಮಾಡಲಿದ್ದೇವೆ. ಜಿಲ್ಲೆಯಲ್ಲಿ ಧರ್ಮ ದಂಗಲ್ಗೆ ಅವಕಾಶ ನೀಡುವುದಿಲ್ಲ. ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ ಎಂದು ಸಚಿವರು ತಿಳಿಸಿದರು.
