
ಮಂಗಳೂರು: ಮಿಸ್ಟರ್ ಕುಮಾರಸ್ವಾಮಿ, ನೀನು ಒಂದು ದಿನವೂ ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟಿಲ್ಲ, ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರ ಅಳು ಎಲ್ಲಾ ಬರೋದೇ ಎಲೆಕ್ಷನ್ ಟೈಮ್‌ನಲ್ಲಿ. ಯಾವುದಾದರೂ ಒಂದು ಗುರುತಿಸುವ ಕೆಲಸ ಚನ್ನಪಟ್ಟಣಕ್ಕೆ ಮಾಡಿರೋದನ್ನ ತೋರಿಸು. ಸುಮ್ಮನೆ ವೋಟಿಗೋಸ್ಕರ ಬಂದು ಮಾತನಾಡೋದಲ್ಲ ಎಂದರು.
ಅಭ್ಯರ್ಥಿಗೆ ಲಾಸ್ ಏನೂ ಆಗಿಲ್ಲ, ಅಭ್ಯರ್ಥಿಗೂ ಚನ್ನಪಟ್ಟಣಕ್ಕೂ ಸಂಬಂಧ ಇಲ್ಲ. ಅವರು ಸೋತಿದ್ದು ಮಂಡ್ಯ ಹಾಗೂ ರಾಮನಗರದಲ್ಲಿ. ನೀನು, ನಿನ್ನ ಧರ್ಮಪತ್ನಿ ಇದ್ದರೂ ಇಲ್ಲಿಗೆ ನೀನು ಏನು ಕೊಟ್ಟೆ? ಚನ್ನಪಟ್ಟಣಕ್ಕೆ ನೀನು ಏನು ಕೊಟ್ಟೆ ಎಂದು ಹೇಳಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಮಂಗಳೂರಿನಲ್ಲೇ ರಾಹುಲ್ ಗಾಂಧಿ ಶಕ್ತಿ ಯೋಜನೆ ಘೋಷಣೆ ಮಾಡಿದ್ದು. ಯಾವ ಯೋಜನೆಯನ್ನೂ ನಾವು ಮುಂದಿನ ಐದು ವರ್ಷ ನಿಲ್ಲಿಸಲ್ಲ. ಇವತ್ತು ವೃದ್ಧಾಪ್ಯ ವೇತನ, ವಿಧವಾ ವೇತನ ಎಲ್ಲವನ್ನೂ ಕೊಡುತ್ತಿದ್ದೇವೆ. ಯಾವುದಾದರೂ ಒಂದು ಕಾರ್ಯಕ್ರಮ ಬಿಜೆಪಿ ಅಧಿಕಾರ ಇದ್ದಾಗಲೂ ನಿಲ್ಲಿಸಲು ಆಗಿಲ್ಲ. ನಮ್ಮದು ಬದುಕಿನ ಬಗ್ಗೆ ಕೊಡೋ ಕಾರ್ಯಕ್ರಮ, ಬಿಜೆಪಿಯದ್ದು ಭಾವನೆ ಬಗ್ಗೆ ಕೊಡೋ ಕಾರ್ಯಕ್ರಮ ಎಂದು ವಾಗ್ದಾಳಿ ನಡೆಸಿದರು.
