
ಬೆಂಗಳೂರು: ಚನ್ನಪಟ್ಟಣದಲ್ಲಿ ಯಾವ ರಣನೂ ಇಲ್ಲ, ರಂಗವೂ ಇಲ್ಲ. ಮತದಾರನ ಹೃದಯ ಗೆಲ್ಲಬೇಕು. ನಾವು ಮಾಡಿರುವ ಕೆಲಸಕ್ಕೆ, ಜನ ಮಾರ್ಕ್ಸ್ ಕೊಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ ಪ್ರಚಾರದ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ. ಈಗ ಏನಿದ್ದರೂ ಜನರ ಲಾಭ ಮಾತ್ರ ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಯಾರು ಏನೇನು ಮಾಡಿದ್ದಾರೆ ಅನ್ನೋ ಪಟ್ಟಿ ಈ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುತ್ತದೆ. ನಾಯಕ ಆದವನು ಮತದಾರರಿಗೆ ಏನು ಕೊಡುತ್ತಾನೆ, ಯಾವ ರೀತಿ ಸಹಾಯ ಮಾಡುತ್ತಾನೆ ಅವರ ಬದುಕನ್ನು ಯಾವ ರೀತಿ ಬದಲಾವಣೆ ಮಾಡುತ್ತಾನೆ ಅದು ಬಹಳ ಮುಖ್ಯ ಎಂದರು.
ಡಿಕೆ ಸುರೇಶ್, ಡಿಕೆ ಶಿವಕುಮಾರ್, ಕುಮಾರಸ್ವಾಮಿ, ಯೋಗೇಶ್ವರ್ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಜನರು ಪಟ್ಟಿ ಹಾಕುತ್ತಾರೆ. ಅದು ಬಿಟ್ಟರೆ ಯಾವ ರಣನೂ ಇಲ್ಲ, ರಂಗನೂ ಇಲ್ಲ ಏನು ಇಲ್ಲ ಎಂದು ಹೇಳಿದರು.
