
ಬಂಟ್ವಾಳ: ಫರಂಗಿಪೇಟೆ ಸಮೀಪದ ಸುಜೀರು ಎಂಬಲ್ಲಿರುವ ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಕಳ್ಳತನ ನಡೆದ ಘಟನೆ ಇಂದು ನಡೆದಿದೆ.
ದೇವಸ್ಥಾನದ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶ ಮಾಡಿದ ಸುಮಾರು 5 ಜನರ ತಂಡ ಒಂದುವರೆ ಕೆ.ಜಿ ತೂಕದ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ದೇವರ ಮೂಗುತಿ ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಸೇರಿ 2.30 ಲಕ್ಷದ ಮೌಲ್ಯದ ನಗ ನಗದುಗಳನ್ನು ಕಳ್ಳರು ಎಗರಿಸಿದ್ದಾರೆ. ಇದರ ಜೊತೆಗೆ ಕಾಣಿಕೆ ಹುಂಡಿಯಲ್ಲಿರುವ ನಗದನ್ನು ಕೊಂಡುಹೋಗಿದ್ದಾರೆ.
ವಾಹನದ ಮೂಲಕ ಬಂದ ಕಳ್ಳರ ತಂಡ ಸುಮಾರು 3.30 ರ ಸಮಯದಲ್ಲಿ ದೇವಸ್ಥಾನದ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶ ಮಾಡಿದ್ದಾರೆ. ಬಳಿಕ ದೇವಸ್ಥಾನದ ಸುತ್ತಲೂ ತಿರುಗಾಡಿ ಮಾಹಿತಿ ಪಡೆದುಕೊಂಡು, ಗರ್ಭಗುಡಿಯ ಒಳಗೆ ಪ್ರವೇಶ ಮಾಡಿದ್ದಾರೆ. ಅಲ್ಲಿ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬಂದು, ಕಳ್ಳತನ ಮಾಡಿದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಒಂದೇ ಚೀಲದಲ್ಲಿ ಭದ್ರಗೊಳಿಸಿ ವಾಪಸು ಹೋಗುವ ದೃಶ್ಯ ಕಂಡು ಬಂದಿದೆ.
ಕಳ್ಳರ ಕೈಯಲ್ಲಿ ಮಾರಕಾಸ್ತ್ರಗಳು ಕೂಡಾ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳತನ ಮಾಡಿದ ಬಳಿಕ ಸುಮಾರು 4 ಗಂಟೆ ಅಂದಾಜಿಗೆ ದೇವಸ್ಥಾನದಿಂದ ಹೊರಗೆ ಹೋಗಿದ್ದಾರೆ.
ಸಿ.ಸಿ.ಕ್ಯಾಮರಾ ಪರಿಶೀಲಿಸಿದಾಗ ಕಳ್ಳರು ಚಪ್ಪಲಿ ಧರಿಸದೆ ಗರ್ಭಗುಡಿಯೊಳಗೆ ಪ್ರವೇಶ ಮಾಡಿ, ಅಲ್ಲಿಂದ ಚಿನ್ನಾಭರಣಗಳನ್ನು ಕಳವು ಮಾಡುವ ದೃಶ್ಯ ಕಂಡು ಬಂತು. ಇದನ್ನು ಖಚಿತಪಡಿಸಿಕೊಂಡ ಬಳಿಕ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ.
