
ಉಡುಪಿ: ಕಾರಿನ ಮೇಲೆ ಪಟಾಕಿ ಎಸೆದ ಬಗ್ಗೆ ಪ್ರಶ್ನಿಸಿದಕ್ಕೆ ಪ್ರವಾಸಿಗರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ಹೂಡೆ ಬೀಚ್‌ನಲ್ಲಿ ನಡೆದಿದೆ.
ನ. 2ರಂದು ನಿಟ್ಟೂರಿನ ಅಶ್ವಿನಿ ಶಿವಕುಮಾರ್ ಕುಟುಂಬಸ್ಥರೊಂದಿಗೆ ಸಂಜೆ ಹೂಡೆ ಬೀಚ್‌ಗೆ ವಿಹಾರಕ್ಕೆಂದು ತೆರಳಿದ್ದಾಗ ಈ ಘಟನೆ ನಡೆದಿದೆ.
ಅಶ್ವಿನಿ ಶಿವಕುಮಾರ್ ಅವರ ಕಾರಿನ ಮೇಲೆ ಸ್ಥಳೀಯರು ಎರಡು ಬಾರಿ ಪಟಾಕಿಯನ್ನು ಎಸೆದಿದ್ದರು. ಅಶ್ವಿನಿ ಜತೆಗಿದ್ದ ರಾಕೇಶ್ ಮರಕಲ ಅವರು ಪಟಾಕಿ ಎಸೆದಿರುವವನ ಬಳಿ ಪ್ರಶ್ನಿಸಿದ್ದಾರೆ.
ಆಗ ಸ್ಥಳೀಯರಾದ ಭೋಜ, ರವಿ, ಸಂತೋಷ್, ಚೇತನ್ ಹಾಗೂ 10ರಿಂದ 12 ಮಂದಿ ಸೇರಿಕೊಂಡು ರಾಕೇಶ್ ಮರಕಲ, ರಾಘವ, ಸಂತೋಷ್ ಹಾಗೂ ಪ್ರದೀಪ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ರಾಕೇಶ್ ಅವರ 4.5 ಲ.ರೂ. ಮೌಲ್ಯದ 4 ಪವನ್ ಚಿನ್ನದ ಚೈನ್ ಹಾಗೂ ಸುಮಾರು 2 ಗ್ರಾಂ ಮೌಲ್ಯದ ಚಿನ್ನದ ಕಿವಿಯೋಲೆ ದೋಚಿದ್ದಾರೆ ಎಂದು ಅಶ್ವಿನಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಅಲ್ಲದೆ ನನ್ನ ಮೇಲೂ ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಶ್ವಿನಿ ಮಲ್ಪೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸೂಕ್ತ ನ್ಯಾಯ ಸಿಗದಿದ್ದರೆ ಠಾಣೆಯ ಎದುರು ಪ್ರತಿಭಟನೆ ನಡೆಸುವುದಾಗಿ ಅಶ್ವಿನಿ ಕುಟುಂಬಸ್ಥರು ತಿಳಿಸಿದ್ದಾರೆ.
