
ಬೆಂಗಳೂರು: ನಾಗಸಂದ್ರದಿಂದ ಮಾದಾವರ ವರೆಗಿನ 3.14-ಕಿಮೀ. ನ ನಮ್ಮ ಮೆಟ್ರೋ ಗ್ರೀನ್ ಲೈನ್ ಸಂಚಾರಕ್ಕೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಾಯೋಗಿಕ ಚಾಲನೆ ನೀಡಿದರು.
ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ಎರಡನೇ ಹಂತದ ಮೆಟ್ರೋ ಯೋಜನೆಯ ಅಡಿಯಲ್ಲಿ ಈ ಮೆಟ್ರೋ ಮಾರ್ಗವನ್ನು ವಿಸ್ತರಿಸಲಾಗಿತ್ತು.
ಯಶವಂತಪುರದಿಂದ ಮಾದಾವರವರೆಗೂ ಪ್ರಾಯೋಗಿಕ ಸಂಚಾರ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ವಿಸ್ತೃತ ಮೆಟ್ರೋ ಮಾರ್ಗದಲ್ಲಿ ಪ್ರಯಾಣಿಸಿದರು.
ನಾಳೆ ಬೆಳಿಗ್ಗೆ ಐದು ಗಂಟೆಯಿಂದ ಮಾದಾವರ ದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ರೈಲು ಸಂಚಾರ ಮಾಡಲಿದೆ. ಕಳೆದ ವರ್ಷ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಟು ಕೆ.ಆರ್ ಪುರ ಮೆಟ್ರೋ ಉದ್ಘಾಟನೆ ಮಾಡಲಾಗಿತ್ತು.
ಯಾವುದೇ ವಿ.ಐ.ಪಿ ಕಾರ್ಯಕ್ರಮಗಳ ಆಯೋಜನೆ ಇಲ್ಲದೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು. ವಿಸ್ತರಿತ ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ ಗಳನ್ನು ಒಳಗೊಂಡ 3 ಮೆಟ್ರೋ ನಿಲ್ದಾಣಗಳಿವೆ.
ಈ ವೇಳೆ ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಎಂ. ಶ್ರೀನಿವಾಸ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಮೊದಲಾದವರು ಉಪಸ್ಥಿತರಿದ್ದರು.
