
ಮಂಗಳೂರು: ಕಾನೂನಿನ ಮುಂದೆ ಎಲ್ಲರೂ ಸಮಾನ ಎಂದು ಡಂಗುರ ಸಾರಿದ ಬಿಜೆಪಿ ಸಿಎಂ ನಡೆಯನ್ನು ಈಗ ನಾಟಕ ಎನ್ನತೊಡಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದಂತೆ ಲೋಕಾಯುಕ್ತ ತನಿಖಾಧಿಕಾರಿ ಮುಂದೆ ಹಾಜರಾಗಿ ಅವರ ಪ್ರಶ್ನೆಗೆ ಉತ್ತರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ತೋರಿದ್ದಾರೆ. ಇದನ್ನು ಕೂಡ ಬಿಜೆಪಿಯವರು ಗೇಲಿ ಮಾಡುತ್ತಿದ್ದಾರೆ ಎಂದರು.
ಈಗ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ ಅದಕ್ಕಾಗಿ ಅಪಪ್ರಚಾರ ಮಾಡಲಾಗುತ್ತಿದೆ. ವಕ್ಫ್ ವಿಚಾರ ಅದಕ್ಕಾಗಿಯೇ ಮುನ್ನೆಲೆಗೆ ತಂದಿದ್ದಾರೆ. ಬಿಜೆಪಿಗೆ ಯಾವುದರಲ್ಲೂ ನಂಬಿಕೆ ಇಲ್ಲ. ಜನರ ಬಗ್ಗೆ ಹಿತಾಸಕ್ತಿ ಇಲ್ಲ, ಹಿಟ್ ಆ್ಯಂಡ್ ರನ್ ಮಾತ್ರ ಎಂದರು.
ಗ್ಯಾರಂಟಿ ಯೋಜನೆಗಳಲ್ಲಿ 53,000 ಕೋಟಿ ರೂ. ನೇರವಾಗಿ ಜನರಿಗೆ ಪಾವತಿ ಮಾಡುತ್ತಿದ್ದೇವೆ, ಅದಕ್ಕೆ ಬಿಜೆಪಿಗೆ ಹೊಟ್ಟೆಕಿಚ್ಚು. ಲೋಕಾಯುಕ್ತರಿಗೆ ಸಿಎಂ ಭೀತಿ ಕಾಡುತ್ತಿದೆ ಎಂಬ ಬಿಜೆಪಿಯವರ ಹೇಳಿಕೆ ಸರಿಯಲ್ಲ, ಪ್ರಜಾಪ್ರಭುತ್ವಕ್ಕೆ ಬೆಲೆಕೊಡುವುದು ಕಲಿಯಲಿ ಎಂದರು.
