
ಮಂಗಳೂರು: ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ 30.65 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ನಡೆದಿದೆ.
ದೂರುದಾರರಿಗೆ ಅ. 19ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ನಿಮ್ಮ ಮೊಬೈಲ್ ನಂಬರ್ ಮೂಲಕ ವಂಚನೆ ಪ್ರಕರಣಗಳು ನಡೆದಿವೆ. ಹಾಗಾಗಿ ಮುಂಬಯಿನ ವಿಮಾನ ನಿಲ್ದಾಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾರೆ.
ಅದೇ ದಿನ ಬೆಳಗ್ಗೆ 11 ಗಂಟೆ ವೇಳೆಗೆ ಇನ್ನೋರ್ವ ಅಪರಿಚಿತ ವ್ಯಕ್ತಿ ಅವರ ಮೊಬೈಲ್‌ಗೆ ವಾಟ್ಸಾಪ್ ವೀಡಿಯೋ ಕಾಲ್ ಮಾಡಿದ್ದಾನೆ. ಆತ ಪೊಲೀಸ್ ಯೂನಿಫಾರಂನಲ್ಲಿದ್ದ. ತನ್ನ ಹೆಸರು ಮನೋಜ್ ಕುಮಾರ್ ಎಂದು ತಿಳಿಸಿದ್ದಾನೆ.
ವಿವೇಕ ದಾಸ್ ಎಂಬ ವ್ಯಕ್ತಿ ಮುಂಬಯಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆದು ಅವ್ಯಹಾರದ ಹಣದಲ್ಲಿ 38 ಲಕ್ಷ ರೂ. ಕಮಿಷನ್ ನಿಮಗೆ ನೀಡಿದ್ದಾನೆ. ಆತನನ್ನು ದಸ್ತಗಿರಿ ಮಾಡುವಾಗ ಈ ಬಗ್ಗೆ ಒಪ್ಪಿಕೊಂಡಿರುವುದಾಗಿ ವಿವರಿಸಿದ್ದಾನೆ.
ಅರೆಸ್ಟ್ ವಾರಂಟ್ ಇರುವುದರಿಂದ ಹೇಳಿದ ಹಾಗೆ ಕೇಳದಿದ್ದಲ್ಲಿ ವಿವೇಕ್‌ದಾಸ್ ಕಡೆಯವರು ಬಂದು ತೊಂದರೆ ನೀಡುತ್ತಾರೆ ಎಂದು ತಿಳಿಸಿದ್ದ. ಇದರಿಂದ ಗಾಬರಿಗೊಂಡ ದೂರುದಾರರು ಅ. 21ರಿಂದ 23ರ ವರೆಗೆ ಹಂತ ಹಂತವಾಗಿ 30.65 ಲಕ್ಷ ರೂ. ಹಣವನ್ನು ಆತ ಹೇಳಿದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಬಳಿಕ ತಾನು ಮೋಸ ಹೋಗಿರುವುದಾಗಿ ಅವರಿಗೆ ತಿಳಿದು ಬಂದಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
