
ಉಳ್ಳಾಲ: ಜಾಮೀನು ಪಡೆದು ಆಚೆ ಬಂದ ವ್ಯಕ್ತಿಯೊಬ್ಬನ ಮೇಲೆ ತಂಡವೊಂದು ದಾಳಿಗೆ ಯತ್ನಿಸಿದ ಘಟನೆ ಉಚ್ಚಿಲ ಕೆ.ಸಿರೋಡ್ ಬಳಿಯ ಜಿಯೋ ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಠಾಣಾಧಿಕಾರಿಯ ಎದುರೇ ಹಿಂದೂ ಮುಖಂಡನಿಗೆ ಹಲ್ಲೆ ನಡೆಸಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಯ ಕಾರಿಗೆ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದ ಎಂಟು ಮಂದಿ ಆಗಂತುಕರು ದಾಳಿ ನಡೆಸಿದ್ದಾರೆ.
ಹಿಂದೂ ಮುಖಂಡನಿಗೆ ಹಲ್ಲೆ ಸಂಬಂಧ ರಾತ್ರೋರಾತ್ರಿ ಹಿಂದು ಸಂಘಟನೆ ಕಾರ್ಯಕರ್ತರು ಉಳ್ಳಾಲ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದರು. ಪರಿಣಾಮವಾಗಿ ಆರೋಪಿತ ಆಸೀಫ್ ನನ್ನು ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಏನಿದು ಘಟನೆ: ಆರೋಪಿ ಅಸೀಫ್ ಜಾಮೀನು ದೊರೆತಿದ್ದು , ಕೇರಳದ ಹೊಸಂಗಡಿ ಮನೆಗೆ ಮಂಗಳೂರು ಜೈಲಿನಿಂದ ಬಿಡುಗಡೆಗೊಂಡು ಕಾರಿನಲ್ಲಿ ತೆರಳುತ್ತಿದ್ದರು. ತಡರಾತ್ರಿ 9.30 ರ ಸುಮಾರಿಗೆ ಕಾರು ಕೆ.ಸಿ.ರೋಡ್ ತಲುಪುತ್ತಿದ್ದಂತೆ ನಾಲ್ಕು ಬೈಕ್ ಗಳಲ್ಲಿ ಬಂದ ಎಂಟು ಮಂದಿ ಹೆಲ್ಮೆಟ್ ಧಾರಿಗಳ ತಂಡ ಕಾರಿಗೆ ಅಡ್ಡಗಟ್ಟಿದ್ದಾರೆ. ಎಲ್ಲರ ಕೈಯಲ್ಲೂ ಮೊಟ್ಟೆ ಹಾಗು ತಲವಾರುಗಳಿತ್ತು ಎಂದು ಆರೋಪಿಸಲಾಗಿದೆ. ಈ ಪೈಕಿ ಒಂದು ಬೈಕಿನಲ್ಲಿದ್ದವರು ಬೀಸಿದ ತಲವಾರು ಆಸೀಫ್ ಇದ್ದ ಕಾರಿಗೆ ತಗಲಿದೆ. ಕಾರಿನ ಗಾಜಿಗೆ ಹಾನಿಯಾಗಿದೆ.
ಆರೋಪಿ ರಕ್ಷಣೆಗಾಗಿ ನೇರವಾಗಿ ಕಾರಿನಲ್ಲಿ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದರು. ಘಟನೆ ನಡೆದು ಎರಡು ದಿನಗಳ ಬಳಿಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
