
ಮೂಡುಬಿದಿರೆ: ಖಾಸಗಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸವಾರೆ, ಸಹಸವಾರೆ ಗಂಭೀರವಾಗಿ ಗಾಯಗೊಂಡ ಘಟನೆ ಮಿಜಾರು ತೋಡಾರಿನಲ್ಲಿರುವ ಎಂಜಿನಿಯರಿಂಗ್ ಕಾಲೇಜೊಂದರ ಬಳಿ ನಡೆದಿದೆ.
ಗಾಯಗೊಂಡವರನ್ನು ಸುಮಿತ್ರಾ ಹಾಗೂ ಸಹಸವಾರೆ ಅವರ ಸಂಬಂಧಿ ಸಾನ್ವಿ ಎಂದು ಗುರುತಿಸಲಾಗಿದೆ.
ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು, ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ ಬಸ್ಸಿಗೆ ಕಲ್ಲೆಸೆದು, ಬಸ್ಸಿನ ಮೇಲೇರಿ ಪ್ರತಿಭಟನೆ ನಡೆಸಿದ್ದಾರೆ. ನಿರ್ಲಕ್ಷ್ಯದಿಂದ ಬಸ್ ಚಲಾಯಿಸುವ ಚಾಲಕರು ಮತ್ತು ಬೇಜವಾಬ್ದಾರಿಯಿಂದ ವರ್ತಿಸುವ ಮಾಲಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಚಾಲಕ ಅತಿ ವೇಗದಿಂದ ಚಲಾಯಿಸಿಕೊಂಡು ಬಂದಿದ್ದು, ಮೈಟ್ ಕಾಲೇಜಿನ ತಿರುವು ಬಳಿಯಲ್ಲಿ ನಿಯಂತ್ರಣ ಕಳೆದುಕೊಂಡ ಬಸ್ ಮೊದಲು ಕಾಲೇಜು ಬಸ್‌ಗೆ ಢಿಕ್ಕಿ ಹೊಡೆದು ಬಳಿಕ ಹೆದ್ದಾರಿ ಬಿಟ್ಟು ಕಾಲೇಜು ರಸ್ತೆಗೆ ನುಗ್ಗಿ ಸ್ಕೂಟರಿಗೆ ಗುದ್ದಿದೆ.
ಸ್ಥಳಕ್ಕಾಗಮಿಸಿದ ಬಸ್ ಮಾಲಕ ರಫೀಕ್ ಸಂತ್ರಸ್ತರಿಗೆ ವೈಯಕ್ತಿಕ ನೆಲೆಯಲ್ಲಿ 5 ಲಕ್ಷ ರೂ. ಪರಿಹಾರ ಒದಗಿಸುತ್ತೇನೆ ಹಾಗೂ ತಪ್ಪಿತಸ್ಥ ಬಸ್ ಚಾಲಕನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಭರವಸೆ ನೀಡಿದರು. ಚಾಲಕ ನಿಜಾಮ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
