
ಉಡುಪಿ: ಕಾರ್ಕಳ ಪರಶುರಾಮ ಮೂರ್ತಿ ರಚಿಸಿದ ಕಲಾವಿದ ಕೃಷ್ಣ ನಾಯ್ಕ್ ಬಂಧನ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ನಿರ್ಮಿತಿ ಕೇಂದ್ರದ ಇಂಜಿನಿಯರ್, ಅಧಿಕಾರಿಗಳು ಹಾಗೂ ಶಾಸಕರನ್ನು ಬಂಧಿಸುವ ಪ್ರಮೇಯ ಬರಬಹುದು ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಡಪಾಯಿ ಕಲಾವಿದ ಕೃಷ್ಣನಾಯ್ಕ್ ನನ್ನು ಬಂಧಿಸಲಾಗಿದೆ. ಆದರೆ, ಕಣ್ಮರೆಯಾದ ಅರ್ಧ ಪರಶುರಾಮನ ಅರ್ಧ ಮೂರ್ತಿ ಎಲ್ಲಿದೆ?. ಸುಟ್ಟು ಹಾಕಿದ್ದಾರೋ, ಹೂತಿಟ್ಟಿದ್ದಾರೋ ಎಂಬುವುದನ್ನು ಪೊಲೀಸರು ಪತ್ತೆ ಮಾಡಬೇಕು. ಮೂರ್ತಿ ಕಣ್ಮರೆಯ ಹಿಂದಿನ ಸಂಪೂರ್ಣ ಸತ್ಯ ಹೊರಗೆ ಬರಬೇಕು ಎಂದರು.
ಇಷ್ಟೊಂದು ಬೃಹತ್ ಹಗರಣವಾದರೂ ಸುನೀಲ್ ಕುಮಾರ್ ಕ್ಷಮೆ ಕೇಳುತ್ತಿಲ್ಲ.ಕಾರ್ಕಳಕ್ಕೆ ಇತಿಹಾಸವಿದೆ, ಸಾಧಕರು ಬಹಳ ಜನ ಇದ್ದಾರೆ. ಹಾಗಾಗಿ ಶಾಸಕ ಸುನೀಲ್ ಕುಮಾರ್ ಜನರ ಮುಂದೆ ಬಂದು ಥೀಂ ಪಾರ್ಕ್ ಬಗ್ಗೆ ಮಾತನಾಡಬೇಕು, ಸ್ಪಷ್ಟನೆ ಕೊಡಬೇಕು ಎಂದರು.
ಸಿಒಡಿ ತನಿಖೆಗಿದ್ದ ಸ್ಟೇ ತೆರವಾಗಿದೆ. ಸಿಐಡಿ ತನಿಖೆಯಲ್ಲಿ ಎಲ್ಲಾ ಸತ್ಯ ಮುನ್ನೆಲೆಗೆ ಬರಬಹುದು. ಸಮಗ್ರ ತನಿಖೆ ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಸರಕಾರದ 33 ಇಲಾಖೆಗಳನ್ನು ಸ್ವಂತ ರಾಜಕೀಯ ಮಾಡಲು ಬಳಸಿದ್ದಾರೆ ಎಂದು ದೂರಿದರು.
ಒಂದೂ ಕಾಲು ಕೋಟಿ ಹಣ ಟೆಂಡರ್ ಆಗುವ ಮೊದಲೇ ಬಿಡುಗಡೆಯಾಗಿದೆ. ಕಲಾವಿದನಿಂದ ಕಂಚು ಖರೀದಿಯಾದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಕೃಷ್ಣ ನಾಯ್ಕ್, ಕಸ್ಟಡಿಯಲ್ಲಿ ಯಾವ ಮಾಹಿತಿ ಹೊರಹಾಕುತ್ತಾನೋ ಕುತೂಹಲ ಇದೆ.
ಬಂಧಿತ ಕಲಾವಿದನಿಂದ ಕೃಷ್ಣನಾಯ್ಕ್ ಗೆ ಮಂಜೂರಾದ ಹಣ ವಾಪಾಸ್ ಪಡೆಯಬೇಕು. ಹಣ ಕಲಾವಿದ ಕೃಷ್ಣನಾಯ್ಕ್ ಅಕೌಂಟ್ ಗೆ ಹೋಗಿಲ್ಲ, ಎಲ್ಲಿಗೆ ವರ್ಗಾವಣೆಯಾಗಿದೆ ಎಂಬುವುದು ಕೂಡ ತನಿಖೆಯಾಗಲಿ ಎಂದರು.
