ಉಡುಪಿ: ಹಿರಿಯ ನಾಗರಿಕರ ಆರೈಕೆಗೆ ನೇಮಕಗೊಂಡಿದ್ದ ಹೋಂ ನರ್ಸ್ ನಗದು ಹಾಗೂ ಆಭರಣ ಕದ್ದು ಪರಾರಿಯಾಗಿದ ಘಟನೆ ಬಡಗುಬೆಟ್ಟುವಿನಲ್ಲಿ ನಡೆದಿದೆ.
ಆರೋಪಿಯನ್ನು ಸಿದ್ದಪ್ಪ ಕೆ. ಕೊಡ್ಲಿ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಗುಬೆಟ್ಟು ನಿವಾಸಿ ಪ್ರಸಾದ್ ಅವರು ಪರ್ಕಳದ ದೀಕ್ಷಾ ಹೋಂ ಹೆಲ್ತ್ ಕೇರ್ ಮುಖೇನ ಸಿದ್ದಪ್ಪ ಕೆ. ಕೊಡ್ಲಿ ಅವರನ್ನು ಹೋಮ್ ನರ್ಸ್ ಆಗಿ ನೇಮಕ ಮಾಡಿಕೊಂಡಿದ್ದರು.
ನ. 17ರಂದು ಬೆಳಗ್ಗೆ 9.15ರಿಂದ ಮಧ್ಯಾಹ್ನ 1.15ರ ಅವಧಿಯಲ್ಲಿ ಮನೆಯ ಹಜಾರದಲ್ಲಿರುವ ರ್ಯಾಕ್ ಮೇಲಿಟ್ಟಿದ್ದ 6 ಗ್ರಾಂ ತೂಕದ ಸುಮಾರು 43,800 ರೂ. ಮೌಲ್ಯದ ವಜ್ರದ ಒಂದು ಜೊತೆ ಕಿವಿ ಓಲೆ ಹಾಗೂ ಮಲಗುವ ಕೊಠಡಿಯ ಲಾಕರ್ನಲ್ಲಿ ಇಟ್ಟಿದ್ದ ಅಂದಾಜು 427 ಗ್ರಾಂ ತೂಕದ 31,17,100 ರೂ. ಮೌಲ್ಯದ ಚಿನ್ನ, ವಜ್ರಾಭರಣಗಳನ್ನು ಕಳವುಗೈಯಲಾಗಿದೆ.
