
ಉಡುಪಿ: 20 ಪ್ರಕರಣಗಳಲ್ಲಿ ದಿ ಮೋಸ್ಟ್ ವಾಂಟೆಡ್ ಆಗಿದ್ದ ನಕ್ಸಲ್ ಮುಖಂಡ ವಿಕ್ರಂ ಗೌಡ ಮೂಲತಃ ಹೆಬ್ರಿ ತಾಲೂಕಿನ ಕೂಡ್ಲು ಬಳಿಯ ನಾಡ್ಪಾಲು ಗ್ರಾಮದ ನಿವಾಸಿ.
ಕುದುರೆಮುಖ ಉದ್ಯಾನವನ ವಾಸಿಗಳನ್ನು ಒಕ್ಕೆಲೆಬ್ಬಿಸುವುದನ್ನು ವಿರೋಧಿಸಿ ಆರಂಭವಾದ ಹೋರಾಟದಲ್ಲಿ ಸಕ್ರಿಯನಾಗಿ ನಕ್ಸಲ್ ಚಳವಳಿಗೆ ಧುಮುಕಿದ್ದ.
ವಿಕ್ರಂ ಗೌಡ ಕಳೆದ 21 ವರ್ಷಗಳಿಂದ ನಕ್ಸಲೈಟ್ ಆಗಿ ಗುರುತಿಸಿಕೊಂಡು ಪೊಲೀಸರಿಗೆ ತಲೆ ನೋವಾಗಿದ್ದ. ಸಾಕೇತ್ ರಾಜನ್‌ನಿಂದ ನಕ್ಸಲರ ಕಾರ್ಯ ಚಟುವಟಿಕೆ ಕುರಿತಂತೆ ತರಬೇತಿ ಪಡೆದಿದ್ದ.
ಕರ್ನಾಟಕ ಮಾತ್ರವಲ್ಲದೇ ಸಮೀಪದ ಕೇರಳ, ತಮಿಳುನಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. ಮೂರು ಬಾರಿ ಕರ್ನಾಟಕದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ.
ನ. 18ರ ರಾತ್ರಿ ಹೆಬ್ರಿಯ ಪೀತಬೈಲಿನಲ್ಲಿ ನಕ್ಸಲ್ ಕಮಾಂಡರ್ ವಿಕ್ರಂ ಗೌಡ ಹತ್ಯೆಯಾದ ವೇಳೆ ತಂಡದಲ್ಲಿ ನಾಲ್ವರು ನಕ್ಸಲರು ಇದ್ದ ಬಗ್ಗೆ ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ.
ಎನ್‌ಕೌಂಟರ್ ಬಳಿಕ ಮೂವರು ನಕ್ಸಲರು ಕಾಡು ದಾರಿಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ಪರಾರಿಯಾಗಿರುವ ಸಾಧ್ಯತೆಯಿದೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಶೃಂಗೇರಿ, ಕುದುರೆಮುಖ ಮಾರ್ಗವಾಗಿ ಚಿಕ್ಕಮಗಳೂರು ಭಾಗಕ್ಕೆ, ಇನ್ನೊಂದು ಮಾರ್ಗ ಬೆಳ್ತಂಗಡಿ, ಶಿರಾಡಿ, ಗುಂಡ್ಯ ಮೂಲಕ ಸುಬ್ರಹ್ಮಣ್ಯ ಕಡೆ ತೆರಳಿ ಅಲ್ಲಿಂದ ಕೊಡಗು, ಕೇರಳ ಭಾಗಕ್ಕೆ ಪರಾರಿಯಾಗಲು ಅವಕಾಶವಿದೆ.
ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಂ ಗೌಡನ ಮೃತದೇಹವನ್ನು ಸಂಜೆ ಸುಮಾರು 5 ಗಂಟೆಯ ವೇಳೆ ಪೊಲೀಸ್ ಭದ್ರತೆಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ತರಲಾಯಿತು. ಆದರೆ ಮೃತರ ಮನೆ ಮಂದಿ ಬಾರದ ಕಾರಣ ಪಂಚನಾಮೆ ನಡೆಸಲು ಸಾಧ್ಯವಾಗಿಲ್ಲ.
ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ.
