
ಉಡುಪಿ: ಜಾಗದ ಖರೀದಿಗೆ ಮುಂಗಡ ಹಣ ಪಡೆದು ನೋಂದಣಿ ಮಾಡಿಸದೆ ವಂಚನೆ ಎಸಗಿದ ಘಟನೆ ನಡೆದಿದೆ.
ಅಂಬಲಪಾಡಿ ಪಂದುಬೆಟ್ಟು ನಿವಾಸಿ ಮನೋಹರ್ ಎಸ್. ಕಲ್ಮಾಡಿ ಇವರಿಗೆ ರಾಮಣ್ಣ ಪರಿಚಯಸ್ಥರಾಗಿದ್ದರು. ಶಿವಳ್ಳಿ ಗ್ರಾಮದ ತನ್ನ ಆಸ್ತಿ ಮಾರಾಟದ ಪ್ರಸ್ತಾವನೆಯನ್ನು ಅವರು ಮನೋಹರ್ ಮುಂದುವರಿಸಿದ್ದರು.
ಈ ಬಗ್ಗೆ ಅವರಿಬ್ಬರು ಜಾಗ ನೋಡಿ ಬಂದಿದ್ದರು. ಜಾಗ ಮಾರಾಟಕ್ಕೆ ರಾಮಣ್ಣ ತನ್ನ ತಂಗಿಯರಾದ ಸುಮತಿ ಮತ್ತು ರಮಣಿ ಒಪ್ಪಿರುವುದಾಗಿ ಖರೀದಿದಾರರಲ್ಲಿ ತಿಳಿಸಿದ್ದರು.
2012ರ ಜ. 6ರಂದು ಕುಂಜಿಬೆಟ್ಟಿನ ಆಫೀಸ್‌ನಲ್ಲಿ ಅಗ್ರಿಮೆಂಟ್‌ಗೆ ಸಹಿ ಹಾಕಿಸಿ ಮುಂಗಡವಾಗಿ ರಾಮಣ್ಣರಿಗೆ 10 ಲಕ್ಷ ರೂ. ಹಾಗೂ ತಲಾ 2 ಲಕ್ಷ ರೂ.ಗಳನ್ನು ಸುಮತಿ ಮತ್ತು ರಮಣಿ ಅವರ ಮನೆಗೆ ಹೋಗಿ ಮನೋಹರ್ ನೀಡಿದ್ದರು.
3 ತಿಂಗಳ ಅನಂತರ ಸುಮತಿ ಶೆಟ್ಟಿಯವರ ಮಗ ಆ ಆಸ್ತಿಯಲ್ಲಿ ಭಾಗ ಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ರಾಮಣ್ಣರಲ್ಲಿ ಕೇಳಿದಾಗ ಎಲ್ಲ ದಾಖಲಾತಿ ಸರಿಪಡಿಸುವುದು ಮತ್ತು ಪ್ರಕರಣ ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ನೋಂದಣಿ ಬಗ್ಗೆ ಪ್ರಸ್ತಾವಿಸಿದಾಗ ರಾಮಣ್ಣ ನೋಂದಣಿಗೆ ದಿನ ಮುಂದೂಡುತ್ತಿದ್ದರು.
ಇದರಿಂದ ಬೇಸತ್ತು ಖರೀದಿದಾರರು ರಾಮಣ್ಣ ಮತ್ತು ಸಹೋದರಿಯರಿಗೆ ನೋಟಿಸ್ ಜಾರಿ ಮಾಡಿದ್ದರು.
ಈ ಬಗ್ಗೆ ರಾಮಣ್ಣ ಫಿರ್ಯಾದುದಾರರನ್ನು ಉದ್ದೇಶಿಸಿ ಜಾಗ ಕೊಡುವುದಿಲ್ಲ, ನಿನಗೆ ಮೋಸ ಮಾಡುವ ಉದ್ದೇಶದಿಂದಲೆ ಅಗ್ರಿಮೆಂಟ್ ಮಾಡಿಸಿದ್ದು ಎಂದು ಬೈದರಲ್ಲದೇ ಜಾಗದ ಬಗ್ಗೆ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಅಕ್ರಮದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
