
ಉಡುಪಿ: ಕೊಂಕಣ ರೈಲ್ವೆಯು ಸಚಿವಾಲಯದೊಂದಿಗೆ ವಿಲೀನಕ್ಕಾಗಿ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದು, ಅದಕ್ಕೆ ರೈಲ್ವೆ ಸಚಿವರು ಸಹಮತ ವ್ಯಕ್ತಪಡಿಸಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹೊಸದಿಲ್ಲಿಯ ರೈಲ್ ಭವನದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಸಂಸದ ಕಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಭೇಟಿಯಾಗಿ ಸಕಲೇಶಪುರ ಘಾಟ್ ಸಮಸ್ಯೆಯ ಪರಿಹಾರದ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಲ್ಲಿ ಸಂಸದರ ತಂಡ ಪ್ರಸ್ತಾಪಿಸಿತು.
ಪಾಲುದಾರಿಕಾ ರಾಜ್ಯ ಸರಕಾರಗಳಾದ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಶೇರು ಮರು ಖರೀದಿಗೆ ಕಾರ್ಯಪ್ರವೃತ್ತರಾಗಲು ಮನವಿ ಮಾಡಲಾಯಿತು. ರೈಲ್ವೆ ಸಚಿವರು ಈ ಕುರಿತು ಮಹತ್ವದ ಸೂಚನೆಯ ಅಧಿಕಾರಿಗಳಿಗೆ ರವಾನಿಸಿದ್ದಾರೆ ಎಂದರು.
ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಹಳಿ ದ್ವಿಗುಣ, ಸುಬ್ರಹ್ಮಣ್ಯ -ಪಡೀಲ್ ಮಾರ್ಗದ ವೇಗ ಹೆಚ್ಚಳ ಹಾಗೂ ಘಾಟ್ ಭಾಗದ ಹರೇ ಬೆಟ್ಟವನ್ನು ಕ್ರಾಸಿಂಗ್ ನಿಲ್ದಾಣವಾಗಿ ಬಳಸುವ ಕುರಿತು ವಿಸ್ತಾರವಾಗಿ ಚರ್ಚಿಸಿದರು.
ಕುಂದಾಪುರ ಉಡುಪಿ ನಿಲ್ದಾಣಗಳಿಗೆ ಈಗಾಗಲೇ ತಾತ್ವಿಕ ಒಪ್ಪಿಗೆ ಸಿಕ್ಕ ದಿಲ್ಲಿ ರೈಲುಗಳ ನಿಲುಗಡೆ ಬಗ್ಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದ್ದು ,ಈ ಬಗ್ಗೆ ಶೀಘ್ರವೇ ಆದೇಶ ಪ್ರಕಟವಾಗಲಿದೆ. ಚಿಕ್ಕಮಗಳೂರು-ತಿರುಪತಿ- ಬೆಂಗಳೂರು ಮಾರ್ಗದ ಮೂಲಕ ಆರಂಭಿಸಲೂ ಸಂಸದರು ಮನವಿಯನ್ನೂ ಮಾಡಿದರು.
