
ಪುತ್ತೂರು: ನಗರಸಭೆ ಅಧ್ಯಕ್ಷೆ ಸಹಿತ ಆಡಳಿತವನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಪಡೀಲು ನಿವಾಸಿ, ಕಾಂಗ್ರೆಸ್ ಮುಖಂಡ ಎಂದು ಹೇಳಿಕೊಳ್ಳುತ್ತಿರುವ ಅದ್ದು ಪಡೀಲುನನ್ನು ವಶಕ್ಕೆ ಪಡೆಯಲಾಗಿದೆ.
ನಗರದ ರಸ್ತೆ ದುಃಸ್ಥಿತಿಯನ್ನು ಟೀಕಿಸಿ ಅದ್ದು ಪಡೀಲು ಅವರು ಸಾಮಾಜಿಕ ಜಾಲತಾಣದಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ ನಾಯ್ಕ ಅವರನ್ನು ಟೀಕಿಸಿದ್ದರು.
ಈ ಕುರಿತು ಲೀಲಾವತಿ ಅವರು ಮಹಿಳಾ ಮತ್ತು ನಗರ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿರಲಿಲ್ಲ. ಈ ಬಗ್ಗೆ ರವಿವಾರ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದ ಬಿಜೆಪಿ ಮುಖಂಡರು ಠಾಣೆಗೆ ಮುತ್ತಿಗೆ ಹಾಕಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದ ಘಟನೆ ನಡೆದಿತ್ತು.
24 ಗಂಟೆಯೊಳಗೆ ಆರೋಪಿಯನ್ನು ಬಂಧಿಸದೇ ಹೋದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
