
ಮಂಗಳೂರು: ಆಳ್ವಾಸ್ ವಿರಾಸತ್ ನಡೆಯುವ ವಿದ್ಯಾಗಿರಿ ಕ್ಯಾಂಪಸ್ 30ನೇ ವರ್ಷದ ಸಾಂಸ್ಕೃತಿಕ ಉತ್ಸವಕ್ಕೆ ಸಜ್ಜಾಗುತ್ತಿದೆ. ಈ ವರ್ಷದ “ವಿರಾಸತ್’ ಸಂಭ್ರಮವು ಡಿ.10ರಿಂದ 15ರ ವರೆಗೆ ನಡೆಯಲಿದೆ.
ಕೃಷಿ ಮೇಳ, ಆಹಾರ ಮೇಳ, ಕರಕುಶಲ ಮೇಳ, ಫಲಪುಷ್ಪ ಮೇಳ, ಚಿತ್ರಕಲಾ ಮೇಳ, ಕೈಮಗ್ಗ ಸೀರೆಗಳ ಪ್ರದರ್ಶನ ಮುಂತಾದ ವಿಶಿಷ್ಟ ಮೇಳಗಳೂ ಇರಲಿವೆ. ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣವನ್ನು ಕೃಷಿ ಮೇಳ ನೀಡಲಿದೆ. ಕೇವಲ ಪ್ರದರ್ಶನವಲ್ಲದೆ ಮಾರಾಟ ಮಳಿಗೆಗಳು, ಪ್ರಾತ್ಯಕ್ಷಿಕೆಗಳೂ ಇರಲಿವೆ.
“ರೈತರ ಸಂತೆ’ ಈ ಬಾರಿಯ ಆಕರ್ಷಣೆ ಯಾಗಿದ್ದು, ಇದಕ್ಕೆ ರೈತರು ಮೊದಲೇ ಹೆಸರು ನೋಂದಾಯಿಸ ಬೇಕು. ರೈತರೇ ತಾವು ಬೆಳೆದ ತರಕಾರಿ, ಹಣ್ಣು, ಪುಷ್ಪಗಳನ್ನು ನೇರ ವಾಗಿ ಇಲ್ಲಿ ಮಾರಾಟ ಮಾಡಬಹುದು.
ದೇಶದ ವಿವಿಧೆಡೆಗಳ ಖ್ಯಾತ ತಂಡ, ವ್ಯಕ್ತಿಗಳಿಂದ ನಡೆಯಲಿರುವ ಸಾಂಸ್ಕೃತಿಕ ಸಂಜೆಯು ಭರಪೂರ ಮನರಂಜನೆ ಒದಗಿಸಲಿದೆ. ಪಂಡಿತ್ ವೆಂಕಟೇಶ್ ಕುಮಾರ್ ಹಿಂದೂ ಸ್ಥಾನಿ ಗಾಯನಸಂಜೆ, ಒಸ್ಮಾನ್ ಮೀರ್ ಸಂಗೀತ ಲಹರಿ, ನೀಲಾದ್ರಿ ಕುಮಾರ್ ಅವರ ಸೌಂಡ್ ಆಫ್ ಇಂಡಿಯಾ, ಭರತ ನಾಟ್ಯ-ಒಡಿಸ್ಸಿ-ಕಥಕ್ ನೃತ್ಯ ಸಂಗಮ, ಸ್ಟೆಕೆಟೊ ಚೆನ್ನೈ ಅವರ ಸಂಗೀತ ಸಂಜೆ ಹೀಗೆ ಪ್ರತಿದಿನವೂ ಒಂದಿಲ್ಲೊಂದು ಆಕರ್ಷಣೆ ಇರಲಿದೆ.
ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ, ತುಳಸಿ ಬೊಮ್ಮನಗೌಡ ಅವರೇ ಬಂದು ಕುಳಿತಂತೆ ತೋರುವ ಪ್ರತಿಕೃತಿಗಳೂ ಇಲ್ಲಿವೆ. ಆಧುನಿಕ ಕಾರ್ಟೂನ್ ಪ್ರತಿಕೃತಿಗಳು, ರೈತ, ರೈತ ಮಹಿಳೆ, ಭಾರತೀಯ ಸಾಂಪ್ರದಾಯಿಕ ದಿರಿಸು ಧರಿಸಿದ ಬೊಂಬೆಗಳು ಕೃಷಿ ಮೇಳದ ಸುತ್ತ ಕಾಣಿಸಿಕೊಳ್ಳಲಿವೆ.
