
ಉಡುಪಿ: ರಾಜ್ಯ ಸರಕಾರದ ಗ್ಯಾರಂಟಿಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿ.ಪಂ. ಕಚೇರಿಯಲ್ಲಿ ಜರಗಿದ ಸಮಿತಿಯ ಮೊದಲ ಸಭೆ ಮಾತನಾಡಿದ ಅವರು, ಸಭೆಗೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಬರಬೇಕು. ಅರ್ಹರಿಗೆ ಯೋಜನೆ ತಲುಪದೆ ಇರಲು ಇರುವ ಕಾರಣ ಪತ್ತೆಹಚ್ಚಿ ಸಮಿತಿಯ ಗಮನಕ್ಕೆ ತರಬೇಕು ಎಂದರು. ಗಮನಕ್ಕೆ ತಂದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಅಥವಾ ಸಮಿತಿಯ ರಾಜ್ಯ ಅಧ್ಯಕ್ಷರೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ತಿಳಿಸಿದರು.
ಯುವ ನಿಧಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಕೆಲವರಿಗೆ ತಲುಪು ತ್ತಿಲ್ಲ ಎಂಬ ದೂರುಗಳಿದ್ದು, ಪರಿಹರಿಸಬೇಕು ಎಂದರು.
ತಾಲೂಕಿನಲ್ಲಿ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ 42,175 ರ ಪೈಕಿ 39,823 ಮಂದಿಗೆ 7.96 ಕೋ.ರೂ. ಮೊತ್ತವನ್ನು ಹಿಂದಿನ ತಿಂಗಳು ಪಾವತಿಸಲಾಗಿದೆ. 29,878 ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಲ್ಲಿ 27,324 ಮಂದಿಗೆ ಅನ್ನಭಾಗ್ಯ ಸೌಲಭ್ಯ ತಲುಪಿಸಲಾಗಿದೆ.
ಮಣಿಪಾಲ ವ್ಯಾಪ್ತಿಯಲ್ಲಿ 30,166, ಉಡುಪಿ ವ್ಯಾಪ್ತಿಯಲ್ಲಿ 27,998 ಗ್ರಾಹಕರಿಗೆ ಗೃಹಜ್ಯೋತಿ ಸೌಲಭ್ಯ ಲಭಿಸಿದೆ. 45 ರಲ್ಲಿ 453 ಮಂದಿಗೆ ಯುವನಿಧಿ ದೊರೆತಿದೆ ಎಂದು ಅಧಿಕಾರಿಗಳು ವಿವರಿಸಿದರು.
