
ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ರಾ.ಹೆ. ಕಾಮಗಾರಿಗೆ ಅಗತ್ಯವಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ಕಾರ್ಯವು ತುಂಬಾ ವಿಳಂಬವಾಗುತ್ತಿದೆ.
ಭೂ ಮಾಲಕರಿಗೆ ವೈಜ್ಞಾನಿಕವಾಗಿ ಪರಿಹಾರವನ್ನು ಆದ್ಯತೆಯ ಮೇಲೆ ನೀಡಿ, ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ರಾ.ಹೆ. ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದರು.
ರಾ.ಹೆ. 169ರಲ್ಲಿ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾರ್ಯಕ್ಕೆ ನಿರ್ಮಾಣ ಮಾಡುತ್ತಿರುವ ಕಬ್ಬಿಣದ ಗರ್ಡರ್‌ಗಳ ಜೋಡಣೆ ಕಾರ್ಯವೂ ಮಂದಗತಿಯಲ್ಲಿ ಸಾಗಿದೆ. ಈ ಹಿಂದೆ ಡಿ. 25ರ ಒಳಗಾಗಿ ಅದನ್ನು ಅಳವಡಿಸುವುದಾಗಿ ಸಭೆಗೆ ತಿಳಿಸಲಾಗಿತ್ತು. ಆದರೆ, ಈ ಕಾರ್ಯವು ಒಪ್ಪಿಕೊಂಡ ವೇಳೆಯಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲದೇ ಇರುವುದು ಕಂಡು ಬರುತ್ತಿದೆ.
ರಾ.ಹೆ. ಉಪವಿಭಾಗದ ಅಭಿಯಂತರರು ಹಾಗೂ ರೈಲ್ವೇ ಇಲಾಖೆಯ ಅಭಿಯಂತರರು ಒಬ್ಬರ ಮೇಲೊಬ್ಬರು ಹೇಳಿಕೊಂಡು ಹೋಗುತ್ತಿರುವುದು ಸರಿಯಲ್ಲ. ಕಾಮಗಾರಿಯ ಪ್ರಗತಿಯ ವೇಗವನ್ನು ಹೆಚ್ಚಿಸಲು ಎರಡೂ ಇಲಾಖೆಯ ಅಧಿಕಾರಿಗಳೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
