
ಮಂಗಳೂರು: ಜ.18 ಮತ್ತು 19 ರಂದು ತಣ್ಣೀರು ಬಾವಿ ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಸಲು ಸಿದ್ಧತೆ ಆರಂಭಗೊಂಡಿದೆ.
ಟೀಂ ಮಂಗಳೂರು ತಂಡದ ಸಹಭಾಗಿತ್ವದಲ್ಲಿ ಉತ್ಸವ ನಡೆಯಲಿದ್ದು,ಭಾರತ ಸೇರಿದಂತೆ ಸುಮಾರು 10ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಅನುದಾನ ಕೊರತೆ ಮತ್ತು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಈ ಉತ್ಸವ 2023 ರಲ್ಲಿ ನಡೆದು ಜನಾಕರ್ಷಣೆ ಪಡೆದಿತ್ತು. ಹೀಗಾಗಿ ಈ ವರ್ಷವೂ ಆಯೋಜಿಸಲಾಗುತ್ತಿದೆ.
ಮಲೇಷ್ಯಾ, ಇಂಡೋನೇಶ್ಯ, ಗ್ರೀಸ್, ಸ್ಪೀಡನ್, ಉಕ್ರೇನ್, ಥಾಯ್ಲೆಂಡ್, ವಿಯೇಟ್ನಾಂ, ಇಸ್ಟೋನಿಯ, ಯು.ಕೆ. ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ. ಕಳೆದ ವರ್ಷದ ಉತ್ಸವಕ್ಕೆ 8 ದೇಶಗಳ 13 ಮಂದಿ ಪ್ರತಿನಿಧಿಗಳು ಭಾಗಿಯಾಗಿದ್ದರು.
ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಬರೋಡ, ಕೇರಳದ ಸುಮಾರು 20 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಒಂದು ಗಾಳಿಪಟವನ್ನು ಎರಡು ಹಗ್ಗಗಳ ಮೂಲಕ ಹಾರಿಸಿ ಜನಾಕರ್ಷಣೆ ಪಡೆದ “ಸ್ಟಂಟ್ ಕೈಟ್’ ಈ ಬಾರಿಯ ಉತ್ಸವದಲ್ಲಿ ಮತ್ತೆ ಗಮನ ಸೆಳೆಯಲಿದೆ. ಯು.ಕೆ., ಫ್ರಾನ್ಸ್, ಥಾಯ್ಲೆಂಡ್ ಮುಂತಾದೆಡೆ ಜನಪ್ರಿಯವಾಗಿರುವ ಸ್ಟಂಟ್ ಕೈಟ್ ಇಲ್ಲಿಯೂ ಪ್ರದರ್ಶಿಸಲು ಸಂಬಂಧಪಟ್ಟ ತಂಡಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗುತ್ತಿದೆ.
