
ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಜ.10ರಿಂದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಕೈಗೊಳ್ಳಲು 2018 ರಿಂದಲೇ ಪತ್ರ ವ್ಯವಹಾರಗಳು ನಡೆದಿದ್ದವು. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ ಸಾರ್ವಜನಿಕರಿಂದ ಪ್ರತಿದಿನವೂ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿವೆ.
ಕಾಮಗಾರಿ ಕೈಗೊಳ್ಳಲು ರೈಲ್ವೇ ಇಲಾಖೆ ಅನುಮತಿ ನೀಡಿದ್ದು, ಸಿವಿಲ್ ಕಾಮಗಾರಿ ಹಾಗೂ ಕಬ್ಬಿಣದ ಬ್ರಿಡ್ಜ್ ನ ಜೋಡಣೆ ಕಾಮಗಾರಿಗಳನ್ನು ಹಗಲು ಹಾಗೂ ರಾತ್ರಿ ಎರಡು ಪಾಳಿಯಲ್ಲಿ ಮಾಡಬೇಕು. ಜ.7ರ ಒಳಗೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗಳನ್ನು ಮುಗಿಸಬೇಕು ಎಂದರು.
