
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಆರಂಭಗೊಂಡಿರುವ ಚಲನ ಚಿತ್ರೋತ್ಸವವನ್ನು ಮುಂದಿನ ವರ್ಷದಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಾಗಿ ನಡೆಸಲು ಚಿಂತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.
ಬಿಜೈ ಭಾರತ್‌ಮಾಲ್‌ನಲ್ಲಿ ಎರಡು ದಿನಗಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕರಾವಳಿ ಉತ್ಸವದಲ್ಲಿ ಚಲನಚಿತ್ರೋತ್ಸವವನ್ನು ನಡೆಸಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಿ ಹೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಲು ಅನುವಾಗುವಂತೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕೆಂಬ ಉದ್ದೇಶವಿದೆ ಎಂದರು.
ಭಾರತದ ಸಿನಿಮಾ ಕ್ಷೇತ್ರದಲ್ಲಿ ಕರಾವಳಿ ಕರ್ನಾಟಕದ ಬಹಳಷ್ಟು ಸಾಧಕರು ಕೊಡುಗೆ ನೀಡಿದ್ದಾರೆ. ಹಿಂದಿ, ಕನ್ನಡದೊಂದಿಗೆ ಸ್ಥಳೀಯ ತುಳು, ಬ್ಯಾರಿ, ಕೊಂಕಣಿ ಭಾಷೆಗಳಲ್ಲಿ ಚಲನಚಿತ್ರೋತ್ಸವಗಳು ಮೂಡಿ ಬಂದಿರುವುದು ಇಲ್ಲಿನ ಕಲಾ ಶ್ರೀಮಂತಿಕೆ ಯನ್ನು ತೋರಿಸುತ್ತದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ಸಿನೆಮಾ ಇಲ್ಲಿನ ಸಂಸ್ಕೃತಿಯಾಗಿದೆ. ಎಲ್ಲಿ ಕಲೆಗೆ ಪ್ರಾಮುಖ್ಯ ನೀಡಲಾಗುತ್ತದೆಯೋ ಅಲ್ಲಿ ಅಭಿವೃದ್ಧಿ ಉತ್ತಮವಾಗಿರುತ್ತದೆ. ರಾಜ ಮಹಾರಾಜರ ಕಾಲದಲ್ಲಿ ಕಲಾ ಚಟುವಟಿಕೆ ಗಳಿಗೆ ಒತ್ತು ನೀಡಿದ್ದರಿಂದ ಆಯಾ ಪ್ರದೇಶಗಳು ಪ್ರಗತಿ ಹೊಂದಿದೆ ಎಂದರು.
