
ಮಂಗಳೂರು: ಸರಕಾರ ಯಾವಾಗಲೂ ಜನರ ಹಿತದೃಷ್ಟಿಯನ್ನು ಇಟ್ಟುಕೊಂಡು ಬೇರೆ ಬೇರೆ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ. ಸುಮ್ಮನೆ ವಿರೋಧಿಸುವ ಬದಲು ಇದರ ಉದ್ದೇಶಗಳ ಬಗ್ಗೆ ಚರ್ಚಿಸಲಿ ಎಂದು ಬಸ್ ಪ್ರಯಾಣ ದರ ಏರಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಹರೀಶ್ ಪೂಂಜ ಅವರ ಗೋವುಗಳ ಬದುಕುವ ಹಕ್ಕಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೋಹತ್ಯೆ ನಿಷೇಧ ಕಾನೂನು ದೇಶದಲ್ಲಿ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗಲೇ ಜಾರಿಗೆ ಬಂದಿದೆ.
ಇಡೀ ದೇಶಕ್ಕೆ ಸಂಬಂಧಪಟ್ಟ ಕಾನೂನು ಅದಾಗಿತ್ತು. ಚುನಾವಣೆ ಉದ್ದೇಶಕ್ಕಾಗಿ ಒಂದೊಂದು ರಾಜ್ಯಗಳಿಗೆ ಒಂದೊಂದು ಕಾನೂನು ಅದಲ್ಲ ಎಂದರು.
ನಾನು ರಾಜಕೀಯ ಮಾತನಾಡುವುದಿಲ್ಲ. ಹಿಂದಿನ ಸರಕಾರದ ಸಂದರ್ಭ ಗೋಶಾಲೆ ನಿರ್ಮಾಣ ಯೋಜನೆ ಘೋಷಣೆಯಾಗಿದೆ. ಎಷ್ಟು ಗೋಶಾಲೆ ಮಾಡಿದ್ದಾರೆ, ಜಿಲ್ಲೆಯಲ್ಲಿ ಎಲ್ಲಿ ಗೋಶಾಲೆ ಆಗಿದೆ ಎಂದು ಪ್ರಶ್ನಿಸಿದರು.
ಪೂಂಜ ಅವರ ಆನೆಗಳ ಕುರಿತ ಸದನದಲ್ಲಿನ ಹೇಳಿಕೆ ಬೇಸರ ತಂದಿತ್ತು. ಅದಕ್ಕಾಗಿ “ಆನೆಗಳಿಗೂ ಬದುಕುವ ಹಕ್ಕು ಇದೆ’ ಎಂದಿದ್ದೆ. ಈಗ ಅದಕ್ಕೆ ಪ್ರತಿಯಾಗಿ ಅವರು ಗೋವುಗಳ ಬಗ್ಗೆ ಪ್ರಶ್ನಿಸಿದ್ದಾರೆ. ಪೂಂಜರಂತಹವರಿಗೆ ಗೋವಿಗೂ ಕೂಡ ಬದುಕುವ ಹಕ್ಕಿದೆ ಎನ್ನುವುದು ಇಲ್ಲಿಯವರೆಗೆ ತಿಳಿದಿಲ್ಲ ಎಂಬುದು ಖೇದಕರ ಸಂಗತಿ. ಹಾಗಾಗಿ ಯಾರಿಗೆಲ್ಲ ಬದುಕುವ ಹಕ್ಕಿದೆ ಎನ್ನುವುದನ್ನು ಅವರಿಗೆ ಪ್ರತ್ಯೇಕವಾಗಿ ಬರೆದು ಕಳುಹಿಸುವೆ ಎಂದು ಕುಟುಕಿದ್ದಾರೆ.
