
ಕಾಪು: ನಕಲಿ ದಾಖಲೆ ಸೃಷ್ಟಿಸಿ, ಸಹಕಾರಿ ಬ್ಯಾಂಕ್‌ನಿಂದ 45 ಲಕ್ಷ ರೂ. ಹಣ ಪಡೆದ ಘಟನೆ ಕಟಪಾಡಿಯಲ್ಲಿ ನಡೆದಿದೆ.
ಆರೋಪಿಗಳನ್ನು ರಿಯಾನತ್ ಬಾನು ಹಾಗೂ ಆಕೆಯ ಪತಿ ನೂಮನ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಅವರು ಕಟಪಾಡಿ ಸಹಕಾರಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಅವರಿಗೆ ದಿನೇಶ್ ಮತ್ತು ರಾಜೇಶ್ ಜಾಮೀನುದಾರರಾಗಿದ್ದರು. ಸಾಲ ಪಡೆದ ಆರೋಪಿಗಳು ಮೂರು ತಿಂಗಳ ಮಾಸಿಕ ಕಂತನ್ನು ಸಂಘಕ್ಕೆ ಪಾವತಿಸಿದ್ದು ಅನಂತರದ ಕಂತನ್ನು ಪಾವತಿ ಮಾಡದೇ ಬಾಕಿಯಿರಿಸಿಕೊಂಡಿದ್ದರು.
ಸಂಘದವರಿಗೆ ಆರೋಪಿಗಳ ಮೇಲೆ ಅನುಮಾನ ಬಂದು ಅವರು ನೀಡಿರುವ ದಾಖಲೆಗಳನ್ನು ಸಂಬಂಧಪಟ್ಟ ಸರಕಾರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ, ಆರೋಪಿಗಳು ಸಾಲ ತೆಗೆದುಕೊಳ್ಳುವ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ನಾಲ್ಕು ಮಂದಿ ಆರೋಪಿಗಳ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
