
ಬೆಂಗಳೂರು: ಮದುವೆಗೆ ಸಾಲ ಕೊಡುವುದಾಗಿ ಯುವತಿಯನ್ನು ಕರೆದೊಯ್ದು ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ಬಿಜೆಪಿ ಮುಖಂಡ ಜಿಮ್ ಸೋಮ ಅಲಿಯಾಸ್ ಸೋಮಶೇಖರ್ ಮೇಲೆ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತ ಯುವತಿಗೆ ಆಕೆಯ ಸ್ನೇಹಿತೆ ಮೂಲಕ ಸೋಮಶೇಖರ್ ಪರಿಚಯವಾಗಿತ್ತು. ಕಳೆದ ವರ್ಷ ಯುವತಿಗೆ ಮದುವೆ ಫಿಕ್ಸ್ ಆಗಿತ್ತು. ಈ ಸಮಯದಲ್ಲಿ ಯುವತಿ ಮದುವೆಗಾಗಿ ಸೋಮಶೇಖರ್ ಬಳಿ ಸುಮಾರು 6 ಲಕ್ಷ ಹಣದ ಸಹಾಯ ಕೇಳಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣ ಕೊಡುವುದಾಗಿ ಸಂತ್ರಸ್ತೆಯನ್ನು ಪಿಜಿಯಿಂದ ಲ್ಯಾಂಗ್ ಫೋರ್ಡ್ ರಸ್ತೆಯ ತನ್ನ ಫ್ಲಾಟ್‌ಗೆ ಕರೆದೊಯ್ದು ಇಚ್ಚೆಗೆ ವಿರುದ್ಧವಾಗಿ ಮದ್ಯಕುಡಿಸಿ ಅತ್ಯಾಚಾರವೆಸಗಿದ್ದಾನೆ.
ಈ ವಿಚಾರ ಹೊರಗಡೆ ಹೇಳಿದರೆ ಪ್ರಾಣ ತೆಗೆಯೋದಾಗಿ ಬೆದರಿಕೆ ಹಾಕಿದ್ದು, ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಘಟನೆ ನಡೆದು ಮೂರು ತಿಂಗಳ ಬಳಿಕ ಸಂತ್ರಸ್ತೆ ಅಶೋಕನಗರ ಠಾಣೆಗೆ ದೂರು ನೀಡಿದ್ದಾಳೆ.
ಸೋಮಶೇಖರ್ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
