
ಮಂಗಳೂರು: ಗೋವಾದಿಂದ ಮಂಗಳೂರು ಹಾಗೂ ಕೇರಳಕ್ಕೆ ಮಾದಕ ವಸ್ತು ಪೂರೈಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೇರಳ ಕೋಝಿಕ್ಕೋಡ್‌ನ ಕಂದಲಾಡ್ ಓರಂಗ್‌ಕುನ್ನು ನಿವಾಸಿ ಕೋಯಾ ಎಂಬವರ ಪುತ್ರ ಶಮೀರ್ ಪಿ.ಕೆ.(42) ಎಂದು ಗುರುತಿಸಲಾಗಿದೆ.
ಗಾಂಜಾವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು, ಮೂಲ್ಕಿ ಬಪ್ಪನಾಡು ರಾಷ್ಟ್ರೀಯ ಹೆದ್ದಾರಿ ಬಳಿ ಆರೋಪಿಯ ಕಾರನ್ನು ತಡೆದು ಆತನನ್ನು ಬಂಧಿಸಿದ್ದಾರೆ.
ಬಂಧಿತನಿಂದ 738 ಗ್ರಾಂ ತೂಕದ 73 ಲಕ್ಷ ರೂ. ಮೌಲ್ಯದ “ಹೈಡ್ರೋ ವೀಡ್ ಗಾಂಜಾ’ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಹೈಡ್ರೋವೀಡ್ ಗಾಂಜಾ: ಸಾಮಾನ್ಯ ಗಾಂಜಾವನ್ನು ನೆಲದಲ್ಲಿ ಬೆಳೆಯುವುದಾದರೆ ಹೈಡ್ರೋ ವೀಡ್ ಗಾಂಜಾವನ್ನು ಮಣ್ಣಿನ ಸಹಾಯವಿಲ್ಲದೆ ಬೆಳೆಯಲಾಗುತ್ತದೆ. ಇತರ ಕೆಲವು ಸೊಪ್ಪು ತರಕಾರಿಗಳನ್ನು ಹೈಡ್ರೋಪೋನಿಕ್ಸ್ ವಿಧಾನದಲ್ಲಿ ನೀರು ಹಾಗೂ ಜಲ ರಸಗೊಬ್ಬರ ಬಳಸಿ ಬೆಳೆಸುವಂತೆ ಗಾಂಜಾವನ್ನೂ ಬೆಳೆಸುತ್ತಾರೆ.
