
ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ಎದುರು 6 ನಕ್ಸಲರು ಶರಣಾಗತಿಯಾಗಿದ್ದು, ಶರಣಾಗತಿಯಾದ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರ ಎಲ್ಲಿವೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಈಗ ನಕ್ಸಲರು ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿದ್ದರು ಎನ್ನಲಾದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಿತ್ತಲೆಗಂಡಿ ಕಾಡಿನಲ್ಲಿ ಪತ್ತೆಯಾಗಿದೆ.
1 ಎಕೆ-47, 303 ಕೋವಿ 5, ಒಂದು ಪಿಸ್ತೂಲ್, 100ಕ್ಕೂ ಹೆಚ್ಚು ಗುಂಡುಗಳು ಮೇಗೂರು ಅರಣ್ಯ ವ್ಯಾಪ್ತಿಯ ಕಿತ್ತಲೆಗಂಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅಪರಿಚಿತರ ಆಯುಧಗಳು ಎಂದು ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಎದುರು ಬುಧವಾರ ರಾತ್ರಿ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್. ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಶರಣಾಗತರಾಗಿದ್ದರು.
ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪೊಲೀಸರು ಬಿಗಿ ಭದ್ರತೆ ನಡುವೆ ಗುರುವಾರ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ 6 ಮಂದಿ ನಕ್ಸಲರನ್ನು ಬಿಟ್ಟು ಬಂದಿದ್ದಾರೆ.
ಆರು ಮಂದಿ ನಕ್ಸಲರ ವಿರುದ್ಧವೂ ‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ’(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ.
