
ಕಾರವಾರ: ಸಿದ್ಧಾಪುರದ ರವೀಂದ್ರ ನಗರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರೆಯಲ್ಲಿ ಭಕ್ತರ ಮೇಲೆ ಕಾರು ಹರಿದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.
ಮೃತ ಯುವತಿಯನ್ನು ಸಿದ್ಧಾಪುರ ಕವಲಕೊಪ್ಪದ ದೀಪಾ ರಾಮಗೊಂಡ (21) ಎಂದು ಗುರುತಿಸಲಾಗಿದ್ದು, ಸಿದ್ದಾಪುರದ ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ ಹಾಗೂ ಗಜಾನನ ಭಟ್ ಗಂಭೀರ ಗಾಯಗೊಂಡಿದ್ದಾರೆ.
ಸಿದ್ಧಾಪುರ ತಾಲೂಕು ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಗಂಭೀರ ಗಾಯಗೊಂಡ ಕಲ್ಪನಾ ನಾಯ್ಕ್ ಹಾಗೂ ಇನ್ನೋರ್ವ ಮಹಿಳೆಯನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಿದ್ದಾಪುರದ ರೋಶನ್ ಫೆರ್ನಾಂಡೀಸ್ ಮದ್ಯ ಸೇವಿಸಿ ಕಾರು ಚಲಾಯಿಸಿದ್ದರಿಂದ ಈ ದುರಂತ ಸಂಭವಿಸಿದೆ. ಭಕ್ತರಿಗೆ ಕಾರನ್ನು ಗುದ್ದಿಸಿದ ನಂತರ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಉದ್ರಿಕ್ತ ಜನರು ಕಲ್ಲು ತೂರಾಟ ನಡೆಸಿ ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ರೋಷನ್‌ನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
