
ಕಾಪು: ದುಡ್ಡು ಕೊಟ್ಟು ಖರೀದಿಸಿದ್ದ ಸೆಕೆಂಡ್ ಹ್ಯಾಂಡ್ ಬಸ್ ಅನ್ನು ಅದರ ಪೂರ್ವ ಮಾಲಕ ಮತ್ತು ಆತನ ತಂದೆ ಕದ್ದೊಯ್ದಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೈಯದ್ ಗೌಸ್ ಎಚ್.ಎಸ್. ವಂಚನೆಗೊಳಗಾದವರು. ಕಾಪುವಿನ ಸಮೀರ್ ಮತ್ತು ಆತನ ತಂದೆ ಅಬ್ದುಲ್ ಖಾದರ್ ವಂಚಿಸಿರುವುದಾಗಿ ದೂರಲಾಗಿದೆ.
ಸೈಯದ್ ಗೌಸ್ ಪರಿಚಿತರಾದ ಹನುಮಂತರಾಯಪ್ಪ ಅವರ ಮೂಲಕ ವಾಗಿ ಓಎಲ್‌ಎಕ್ಸ್‌ನಲ್ಲಿ ಸಿಕ್ಕಿದ ನಂಬರ್‌ಗೆ ಕರೆ ಮಾಡಿದಾಗ ಕಾಪುವಿನ ಸಮೀರ್ ತನ್ನ ಬಳಿ ಮಾರಾಟಕ್ಕೆ ಹಳೆ ಬಸ್ಸು ಇದೆ, ಬಂದು ನೋಡಿ ಎಂದು ಹೇಳಿದ್ದರು.
ಅದಾದ ಒಂದೆರಡು ದಿನಗಳ ಬಳಿಕ ಸೈಯದ್ ಗೌಸ್ ಎಚ್.ಎಸ್. ಅವರು ತನ್ನ ಮಗ ಸೈಯದ್ ಸಿದ್ದಿಕ್ ಬಾಷಾ ಮತ್ತು ಆತನ ಸ್ನೇಹಿತ ಜಾವೇದ್ ಅವರ ಜತೆಗೂಡಿ ಮಲ್ಲಾರಿಗೆ ಬಂದು ಸಮೀರ್, ಆತನ ತಂದೆ ಅಬ್ದುಲ್ ಖಾದರ್ ಅವರ ಮನೆಯ ಕಾಂಪೌಂಡ್‌ನಲ್ಲಿ 2017ನೇ ಮಾಡೆಲ್‌ನ ಬಸ್ಸನ್ನು ನೋಡಿದ್ದರು.
ಬಸ್ ಒಪ್ಪಿಗೆಯಾದ ಬಳಿಕ ಸಮೀರ್, ಆತನ ತಂದೆ ಅಬ್ದುಲ್ ಖಾದರ್ ಜತೆಗೆ ಮಾತುಕತೆ ನಡೆಸಿ 9.50 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದ್ದು ಅದರಂತೆ 2 ಲಕ್ಷ ರೂ. ಮುಂಗಡ ಹಣ ಕೊಟ್ಟಿದ್ದು, ಉಳಿದ ಹಣ 15 ದಿನಗಳ ಒಳಗಾಗಿ ಕೊಡಬೇಕು ಎಂದು ಹೇಳಿ ಒಂದು ಖಾಲಿ ಚೆಕ್ ಪಡೆದುಕೊಂಡು ಬಸ್‌ನ್ನು ನೀಡಿದ್ದರು. ಒಪ್ಪಂದದಂತೆ ಖರೀದಿದಾರರು ಬಸ್ ಅನ್ನು ತುಮಕೂರಿಗೆ ತೆಗೆದುಕೊಂಡು ಹೋಗಿದ್ದರು.
ಬಳಿಕ ಫೋನ್ ಪೇ ಮೂಲಕ 2.80 ಲಕ್ಷ ರೂ. ಮತ್ತು ನಗದು ಮೂಲಕ 6.20 ಲಕ್ಷ ರೂ. ಹಣವನ್ನು ಒಟ್ಟು 9 ಲಕ್ಷ ರೂ. ಅನ್ನು ಬಸ್ಸಿನ ಆರ್‌ಸಿ, ಟ್ರಾನ್ಸ್‌ಫರ್ ಮಾಡಲು ಹಾಗೂ ಹಣಕಾಸಿನ ಸಮಸ್ಯೆ ಇದೆ ಎಂದು ಹೇಳಿ ಆರೋಪಿಗಳು ಪಡೆದುಕೊಂಡಿದ್ದರು.
ಈ ನಡುವೆ ಆರೋಪಿತರಾದ ಸಮೀರ್ ಮತ್ತು ಅವನ ತಂದೆ ಅಬ್ದುಲ್ ಖಾದರ್ ಬಸ್ ಅನ್ನು ತಾನು ನಿಲ್ಲಿಸಿದ್ದ ಸ್ಥಳದಿಂದ ಕಳವು ಮಾಡಿಸಿ ವಾಪಸು ಕೊಂಡೊಯ್ದಿದ್ದು, ಈಗ ಅದನ್ನು ಮರಳಿಸದೇ ವ್ಯವಹಾರದಲ್ಲಿ ಮೋಸ ಮಾಡಿದ್ದಾರೆ ಎಂದು ಸೈಯದ್ ಗೌಸ್ ಎಚ್.ಎಸ್. ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
