
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2025ರ ಮಾರ್ಚ್ 24ರಂದು ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾಮೂಹಿಕ ವಿವಾಹವಾಗಲು ಬಯಸುವವರು ಶ್ರೀ ದೇವಳದ ಕಚೇರಿಯಿಂದ ಅರ್ಜಿಯನ್ನು ಪಡೆದು, ಇದೇ ಕಚೇರಿಗೆ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಫೆಬ್ರವರಿ 20 ರೊಳಗೆ ವಧು-ವರರು ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಫೆಬ್ರವರಿ 24ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುತ್ತದೆ.
ಏನೆಲ್ಲಾ ಮಾಹಿತಿ ಬೇಕು: ವಧು-ವರರು ತಮ್ಮ ಪೂರ್ಣ ವಿಳಾಸದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರ ಪ್ರತಿ, ಪಾಸ್‌ಪೋರ್ಟ್ ಸೈಜ್‌ನ 2 ಪೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು-ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಅಥವಾ ಗ್ರಾಮ ಆಡಳಿತಾಧಿಕಾರಿಯಿಂದ ಅಥವಾ ತಹಶೀಲ್ದಾರರಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಸರಳ ಸಾಮೂಹಿಕ ವಿವಾಹವಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್, ಶಲ್ಯ, ಪೇಟ, ಬಾಸಿಂಗ್ ಇತ್ಯಾದಿಗಳಿಗಾಗಿ ಶ್ರೀ ದೇವಳದಿಂದ ಪ್ರೋತ್ಸಾಹ ಧನವಾಗಿ ರೂ.5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ10 ಸಾವಿರ ರೂಪಾಯಿ ನೀಡಲಾಗುತ್ತದೆ. ಸುಮಾರು 40 ಸಾವಿರ ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
