
ಸುಳ್ಯ: ಪತ್ನಿಯನ್ನು ಗುಂಡಿಕ್ಕಿ ಕೊಲೆಗೈದ ಪತಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ನಡೆದಿದೆ.
ಹತ್ಯೆಗೊಳಗಾದವರನ್ನು ವಿನೋದ (43) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ನಿವಾಸಿ, ಕೃಷಿಕ ರಾಮಚಂದ್ರ ಗೌಡ ಅಲಿಯಾಸ್ ಚಂದ್ರ (54) ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರಾಮಚಂದ್ರ ಕಳೆದ ರಾತ್ರಿ ಕುಡಿದು ಬಂದಿದ್ದು, ಊಟ ಮಾಡಿದ ಬಳಿಕ ಕ್ಷುಲ್ಲಕ ಕಾರಣಕ್ಕೆ ಪತ್ನಿ ಹಾಗೂ ಪುತ್ರನೊಡನೆ ಜಗಳ ಆರಂಭಿಸಿದ್ದು, ಬಳಿಕ ಗಲಾಟೆ ವಿಪರೀತವಾಗಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಗಲಾಟೆ ವೇಳೆ ರಾಮಚಂದ್ರ ತಾನು ಪರವಾನಗಿ ಹೊಂದಿದ್ದ ಕೋವಿಯಿಂದ ಹಿರಿಯ ಮಗ ಪ್ರಶಾಂತ್ ಗೆ ಗುರಿಯಿಟ್ಟಿದ್ದು ಇದನ್ನು ತಪ್ಪಿಸಲು ಪತ್ನಿ ವಿನೋದ ಕೋವಿಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದು, ಈ ವೇಳೆ ಕೋವಿಯನ್ನು ಆಕೆಯ ಮೇಲೆ ಗುರಿಯಿರಿಸಿ ಗುಂಡಿಕ್ಕಿದ್ದಾನೆ.
ಬಳಿಕ ರಾಮಚಂದ್ರ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಈ ಕುರಿತಂತೆ ಮಗ ಪ್ರಶಾಂತ್ ಹೇಳಿಕೆಯಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
