
ಮಂಡ್ಯ: ಮಂಡ್ಯದಲ್ಲಿ ರೈತರ ಜಮೀನು, ಪುರಾತತ್ವ ಇಲಾಖೆಯ ಆಸ್ತಿಗಳ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರು ಎಂದು ನಮೂದಾಗಿದ್ದು, ಇದರಿಂದ ರೈತರು ಆಕ್ರೋಶಕ್ಕೊಳಗಾಗಿದ್ದು, ಈ ಅನ್ಯಾಯನ್ನು ಖಂಡಿಸಿ ರೈತರು ಮತ್ತು ಹಿಂದೂ ಸಂಘಟನೆಗಳು ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದೆ.
ಆರ್‌ಟಿಸಿಯಲ್ಲಿ ಸ್ವಾಧೀನದಾರರ ಕಲಂ ನಲ್ಲಿ ರೈತರ ಹೆಸರಿದ್ದರೂ ಋಣ ಕಲಂ ನಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮದ 50ಕ್ಕೂ ಹೆಚ್ಚು ರೈತರ ಆರ್‌ಟಿಸಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದು ಆಗಿದೆ. ರೈತರು ಜಮೀನು ಮಾರಾಟ, ಜಮೀನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಆರ್‌ಟಿಸಿ ಪರಿಶೀಲನೆ ಮಾಡಿದಾಗ ವಕ್ಫ್ ಹೆಸರು ಬೆಳಕಿಗೆ ಬಂದಿದೆ.
ಸಾಮನ್ಯವಾಗಿ ಜಮೀನನ ಮೇಲೆ ಸಾಲ ತೆಗೆದುಕೊಂಡರೆ, ಕ್ರಯ ಮಾಡಿಸಿದರೆ ಮಾತ್ರ ಋಣ ಕಲಂ ನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ಉಲ್ಲೇಖವಾಗುತ್ತದೆ. ಆದರೆ ಬಹುತೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ.
ಶ್ರೀರಂಗಪಟ್ಟಣ ಸುತ್ತ ಇರುವ ಮದ್ದಿನ ಮನೆ ಸೇರಿದಂತೆ ಪುರಾತತ್ವ ಇಲಾಖೆ ಹತ್ತಾರು ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿದೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಂದ್ ಮಾಡಿ ಹೋರಾಟ ಯಶಸ್ವಿಗೆ ಮನವಿ ಮಾಡಲಾಗಿದ್ದು, ಬಂದ್ ಜೊತೆಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಸಾಥ್ ನೀಡಿವೆ.
