
ರಾಯಚೂರು: ಸರ್ಕಾರಿ ಬಸ್ ಹಾಗೂ ಟ್ರ‍್ಯಾಕ್ಟರ್ ನಡುವೆ ಡಿಕ್ಕಿಯಾದ ಘಟನೆ ಲಿಂಗಸುಗೂರು ತಾಲೂಕಿನ ಬನ್ನಿಗೋಳ ಗ್ರಾಮದ ಬಳಿ ನಡೆದಿದೆ.
ಈ ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದು, 18 ಜನ ಗಾಯಗೊಂಡಿದ್ದಾರೆ. ಮೃತ ಯುವತಿಯನ್ನು ಶ್ರೀದೇವಿ (19) ಎಂದು ಗುರುತಿಸಲಾಗಿದೆ.
ಬನ್ನಿಗೋಳ ಗ್ರಾಮದ ಕೂಲಿಕಾರ್ಮಿಕರು ಟ್ರ‍್ಯಾಕ್ಟರ್‌ನಲ್ಲಿ ಕೂಲಿ ಕೆಲಸಕ್ಕೆ ಹೊರಟಿದ್ದರು. ಈ ವೇಳೆ ಬಸ್ ಎದುರಿಗೆ ಬಂದು ಡಿಕ್ಕಿ ಹೊಡೆದಿದ್ದು, ಟ್ರ‍್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮ ಟ್ರ‍್ಯಾಕ್ಟರ್‌ನಲ್ಲಿದ್ದ ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಬಸ್ ಪಕ್ಕದ ಜಮೀನಿಗೆ ಇಳಿದಿದ್ದು, ಬಸ್ ಹಾಗೂ ಟ್ರ‍್ಯಾಕ್ಟರ್ ನಲ್ಲಿದ್ದವರು ಸೇರಿ 18 ಜನರು ಗಾಯಗೊಂಡಿದ್ದಾರೆ. ಗಾಯಳುಗಳನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಬಗ್ಗೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
