
ಮಂಗಳೂರು: ಮಸಾಜ್ ಪಾರ್ಲರ್ ಒಳಗೆ ನುಗ್ಗಿ ದಾಂಧಲೆ ನಡೆಸಿದ ಸಂಬಂಧ ರಾಮಸೇನೆ ಸಂಸ್ಥಾಪಕ ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಸಾದ್ ಅತ್ತಾವರ ನೇತೃತ್ವದ ಸಂಘಟನೆಯ ಹತ್ತು ಜನ ಕಾರ್ಯಕರ್ತರು ಬಿಜೈ ಕೆಎಸ್ಆರ್ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ದಾಳಿ ನಡೆಸಿದ್ದರು. ಸೆಲೂನ್ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದು, ಪೀಠೋಪಕರಣ ಧ್ವಂಸ ಮಾಡಿದ್ದರು.
ಈ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿಸಿದ್ದು, ಬಳಿಕ ರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಸಾದ್ ಅತ್ತಾವರ್ ಹಾಗೂ 9ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮಂಗಳೂರು ಹೊರವಲಯದ ಕುಡುಪು ಮನೆಯಲ್ಲಿದ್ದ ಅವರನ್ನು, ಅಲ್ಲಿಂದಲೇ ಪೊಲೀಸರು ಅವರನ್ನು ಎಳೆದೊಯ್ದಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ: ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿಮಾಡಿ ಪೀಠೋಪಕರಣ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ದೇವರ ಹೆಸರು ಹೇಳಿಕೊಂಡು ಶ್ರೀರಾಮನಿಗೆ ಕಳಂಕ ತರುವ ಕೆಲಸ ಮಾಡಬೇಡಿ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ ಎಂದು ಕಿಡಿಕಾರಿದ್ದಾರೆ.
