
ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್ ಸಿಡಿಸಿಸಿ ಬ್ಯಾಂಕಿನ ಬ್ಯಾಂಕ್ ನಿರೀಕ್ಷಕ ಎಸ್. ಜಗದೀಶ್ಚಂದ್ರ ಅಂಚನ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಭಗವತಿ ಸಹಕಾರ ಬ್ಯಾಂಕಿನ ವ್ಯವಸ್ಥಾಪಕ ರಾಘವ ಆರ್.ಉಚ್ಚಿಲ್ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಶನಿವಾರ ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್. ಜಗದೀಶ್ಚಂದ್ರ ಅಂಚನ್ ಅಧ್ಯಕ್ಷರಾಗಿ ಎರಡನೇ ಅವಧಿಗೆ ಪುನರಾಯ್ಕೆ ಗೊಂಡರೆ, ರಾಘವ ಆರ್. ಉಚ್ಚಿಲ್ ಮೊದಲ ಬಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ಜಗದೀಶ್ಚಂದ್ರ ಅಂಚನ್ ಕಳೆದ 20 ವರ್ಷಗಳಿಂದ ಸಂಘದ ನಿರ್ದೇಶಕರಾಗಿ, 2007ರಲ್ಲಿ ಉಪಾಧ್ಯಕ್ಷರಾಗಿ , 2020-25ನೇ ಸಾಲಿನಲ್ಲಿ ಅಧ್ಯಕ್ಷರಾಗಿ, ಇದೀಗ ಮುಂದಿನ ಅವಧಿಗೂ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ರಾಘವ ಆರ್.ಉಚ್ಚಿಲ್ ಕಳೆದ ಹತ್ತು ವರ್ಷಗಳಿಂದ ನಿರ್ದೇಶಕರಾಗಿದ್ದು, ಈ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಕೃತಜ್ಞತೆ ಸಮರ್ಪಣೆ: ಸುಮಾರು 93 ವರ್ಷಗಳ ಇತಿಹಾಸವನ್ನು ಹೊಂದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ನೌಕರರ ಏಕೈಕ ಸಹಕಾರಿ ಸಂಸ್ಥೆ ‘ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು ಇಂದು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಮುಖ್ಯ ಕಾರಣಕರ್ತರಾಗಿದ್ದಾರೆ.
ಅವರ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನದಿಂದಲೇ ಸಂಘವು ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಸ್ವಂತ ಕಟ್ಟಡವನ್ನು ಹೊಂದಲು ಸಾಧ್ಯವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಕೂಡ ಅವರ ಮಾರ್ಗದರ್ಶನದಲ್ಲೇ ನಡೆದು 15 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಇದೀಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಕೂಡ ಅವಿರೋಧವಾಗಿ ಆಯ್ಕೆಗೊಂಡಿದ್ದು, ಈ ಸಂದರ್ಭದಲ್ಲಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ನೂತನ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಎಸ್.ಜಗದೀಶ್ಚಂದ್ರ ಅಂಚನ್ ಕೃತಜ್ಞತೆಯನ್ನು ಸಮರ್ಪಿಸಿದರು.
