
ಉಡುಪಿ: ಕಡಲಿನಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಕಡಲ ತೀರದಲ್ಲಿ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮವನ್ನು ಕೋಟ ಮಣೂರು ಪಡುಕರೆ ಸಮುದ್ರ ದಡದಲ್ಲಿ ನಡೆಸಲಾಯಿತು.
ಭಾನುವಾರ ಸಂಜೆ ನಾಲ್ಕು ಗಂಟೆಗೆ ಕಡಲ ತೀರದಲ್ಲಿ 108 ಜನರ ತಂಡವಾಗಿ ಕುಳಿತ ಸಾವಿರಾರು ಜನರು ಈ ವಿಷ್ಣು ಸಹಸ್ರನಾಮ ಅಭಿಯಾನದಲ್ಲಿ ಭಾಗಿಯಾಗಿದ್ದರು.
ಇದರ ಭಾಗವಾಗಿ ಈ ಹಿಂದೆ ಎರಡು ಬಾರಿ ಇದರ ಪ್ರಾಯೋಗಿಕ ಪ್ರಯೋಗ ಮಾಡಿ ಯಶಸ್ವಿಯಾಗಿತ್ತು. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರಲ್ಲಿ ಭಾಗವಹಿಸಿ ಕರಾವಳಿಯ ಕಡಲ ತೀರದ ಸುರಕ್ಷತೆಯಲ್ಲಿ ಪಾಲ್ಗೊಳ್ಳಲು ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರು ತನಕ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪರಿಣಾಮಕಾರಿ ಎಂದು ಗೀತಾನಂದ ಫೌಂಡೇಶನ್ ವಿಶ್ವಸ್ಥರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಹೇಳಿದರು.
ಸಮುದ್ರ ತಟದಲ್ಲಿ ಕೇಶವ ಶಿಶುಮಂದಿರದ ಅಧ್ಯಕ್ಷ ಕೃಷ್ಣ ಹಂದೆ ಅವರು, ಅರಸಿನ ಕುಂಕುಮ ಹಾಗೂ ಹಾಲು ಎರೆದು ಮಂತ್ರ ಪಠಿಸಿ ಸಮುದ್ರ ಪೂಜೆ ನೆರವೇರಿಸಿದರು.
