
ನವದೆಹಲಿ: ಇದೆ ಬುಧವಾರದಿಂದ (ಫೆ. 5) ಮೂರು ದಿನಗಳ ಕಾಲ ಆರ್ಬಿಐನ ಎಂಪಿಸಿ ಸಭೆ ನಡೆಯಲಿದೆ.
ವಿವಿಧ ಆರ್ಥಿಕ ತಜ್ಞರ ಪ್ರಕಾರ ಈ ಬಾರಿಯ ಎಂಪಿಸಿ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ. ವಿವಿಧ ಸಂಸ್ಥೆಗಳು ನಡೆಸಿದ ಪೋಲಿಂಗ್ನಲ್ಲಿ ಬಡ್ಡಿದರ 25 ಮೂಲಾಂಕಗಳಷ್ಟು ಕಡಿಮೆಗೊಳಿಸಬಹುದು ಎನ್ನುವ ಅಭಿಪ್ರಾಯವಿದೆ.
ಫೆಬ್ರವರಿ 7, ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಆರ್ಬಿಐನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.
ಹಿಂದಿನ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹಣದುಬ್ಬರ ಮತ್ತು ಬಡ್ಡಿದರ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಹೊಸ ಗವರ್ನರ್ ಅವರು ನಿರ್ಧಾರಗಳ ವಿಚಾರದಲ್ಲಿ ತುಸು ಉದಾರವಾಗಿರುತ್ತಾರೆ ಎನ್ನಲಾಗಿದೆ.
ಆರ್ಬಿಐಗೆ ಬಡ್ಡಿದರ ಕಡಿತ ಮಾಡುವ ನಿರ್ಧಾರಕ್ಕೆ ಅಡ್ಡಿಯಾಗಿರುವುದು ಹಣದುಬ್ಬರ. ಈ ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಆರ್ಬಿಐ ಗುರಿ ಸದ್ಯಕ್ಕೆ ಸಾಕಾರಗೊಂಡಿಲ್ಲ. ಹಣದುಬ್ಬರ ಶೇ. 5ರ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಆದರೆ, ಮುಂಬರುವ ದಿನಗಳಲ್ಲಿ ಬೆಲೆ ಏರಿಕೆ ಪ್ರಮಾಣ ತಗ್ಗುವ ಸಾಧ್ಯತೆ ಇದ್ದು, ಹಣದುಬ್ಬರವೂ ತಹಬದಿಗೆ ಬರಬಹುದು ಎನ್ನಲಾಗಿದೆ.
