
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಎಲ್ಲ ಅವಶ್ಯಕ ವಸ್ತುಗಳ ದರ ಏರುಗತಿಯತ್ತ ಸಾಗುತ್ತಿದೆ. ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC) ಸೇರಿ ಎಲ್ಲಾ ರೀತಿಯ ರಾಜ್ಯ ಸಾರಿಗೆ ಬಸ್‌ಗಳ ದರವನ್ನು ಈಗಾಗಲೇ ಹೆಚ್ಚಳ ಮಾಡಲಾಗಿದೆ. ಈ ಸಾಲಿನಲ್ಲಿ ಇದೀಗ ಮೆಟ್ರೋ ರೈಲುಗಳೂ ಸೇರಿಕೊಳ್ಳಲಿವೆ.
ಫೆಬ್ರವರಿ 9, 2025 ರಂದು ಜಾರಿಗೆ ಬಂದಿರುವ ಪ್ರಯಾಣ ದರ ಪರಿಷ್ಕರಣೆಯು ಗರಿಷ್ಠ ಮೆಟ್ರೋ ದರವನ್ನು ₹60 ರಿಂದ ₹90 ಕ್ಕೆ ಹೆಚ್ಚಿಸಿದೆ. ಹೆಚ್ಚುವರಿಯಾಗಿ, BMRCL ಪೀಕ್ ಮತ್ತು ನಾನ್-ಪೀಕ್ ಅವರ್‌ಗಳಿಗೆ ಪ್ರತ್ಯೇಕ ದರಗಳನ್ನು ಪರಿಚಯಿಸಿದೆ. 20 ರಿಂದ 25 ಕಿಮೀ ಪ್ರಯಾಣಕ್ಕೆ ಈಗ ₹80 ವೆಚ್ಚ ಮಾಡಬೇಕಾಗುತ್ತದೆ ಮತ್ತು 25 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಕ್ಕೆ ಗರಿಷ್ಠ ದರ ₹90 ರೂ ಎಂದು ನಿಗದಿಯಾಗಿದೆ.
BMRCL ಪ್ರಕಾರ, ಸ್ಮಾರ್ಟ್ ಕಾರ್ಡ್ ಬಳಕೆದಾರರು ಜನದಟ್ಟಣೆ ಇಲ್ಲದ ಸಮಯದಲ್ಲಿ, ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ 10% ವರೆಗೆ ರಿಯಾಯಿತಿಯನ್ನು ಪಡೆಯಲಿದ್ದಾರೆ.
ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿರುವುದು ಪ್ರಯಾಣಿಕರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಟೀಕಿಸಿದ್ದಾರೆ. ದರ ಹೆಚ್ಚಳವು ಜನರನ್ನು ಖಾಸಗಿ ವಾಹನಗಳತ್ತ ಮುಖಮಾಡುವಂತೆ ಮಾಡುತ್ತದೆ. ಈಗಾಗಲೇ ನಗರದ ತೀವ್ರ ಟ್ರಾಫಿಕ್ ದಟ್ಟಣೆಯನ್ನು ಎದುರಿಸುತ್ತಿದ್ದು ಇದನ್ನು ಇನ್ನಷ್ಟು ಹದಗೆಡಿಸುವ ಕ್ರಮ ಎಂದು ವಿವರಿಸಿದ ಮೋಹನ್, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಬೆಲೆ ನಿಯಮಿತತೆ ಮತ್ತು ಪಾರದರ್ಶಕತೆಯ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
